ಕೊಡಗಿನಲ್ಲಿ ನಿರಂತರ ತುಂತುರು ಮಳೆ : ಹಾರಂಗಿಯಲ್ಲಿ ನೀರಿನ ಮಟ್ಟ ಹೆಚ್ಚಳ

ಕೊಡಗಿನಲ್ಲಿ ನಿರಂತರ ತುಂತುರು ಮಳೆ : ಹಾರಂಗಿಯಲ್ಲಿ ನೀರಿನ ಮಟ್ಟ ಹೆಚ್ಚಳ

CI   ¦    Oct 23, 2019 09:30:06 AM (IST)
ಕೊಡಗಿನಲ್ಲಿ ನಿರಂತರ ತುಂತುರು ಮಳೆ : ಹಾರಂಗಿಯಲ್ಲಿ ನೀರಿನ ಮಟ್ಟ ಹೆಚ್ಚಳ

ಮಡಿಕೇರಿ: ರಾಜ್ಯ ವ್ಯಾಪಿ ಧಾರಾಕಾರ ಮಳೆಯಾಗುತ್ತಿದ್ದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ನಿರಂತರ ತುಂತುರು ಮಳೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ಉತ್ತಮ ಮಳೆಯ ವಾತಾವರಣದಲ್ಲಿದ್ದ ಜಿಲ್ಲೆಯಲ್ಲೀಗ ಮೋಡ ಮತ್ತು ಮಂಜು ಕವಿದಿದೆ. ಬಿರುಸಲ್ಲದಿದ್ದರೂ ಎಡೆಬಿಡದೆ ಮಳೆಹನಿ ಬೀಳುತ್ತಿರುವುದರಿಂದ ಜನ ಕಿರಿಕಿರಿ ಅನುಭವಿಸುಂತ್ತಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಪ್ರವಾಹದ ಪರಿಸ್ಥಿತಿಯನ್ನು ಎದುರಿಸಿದ್ದ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಮತ್ತೆ ಬಿರುಸು ಪಡೆದುಕೊಂಡಿತ್ತು. ಆದರೆ ಮಂಗಳವಾರ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ತಲಕಾವೇರಿ ಸೇರಿದಂತೆ ವಿವಿಧೆಡೆ ತುಂತುರು ಮಳೆಯಾಗಿದೆ. 

ಹಾರಂಗಿ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ   ಜಲಾಶಯ ಮತ್ತೊಮ್ಮೆ ಭರ್ತಿಯಾಗಿದೆ.

ವರ್ಷದಲ್ಲಿ ಒಂದು ಭಾರಿ ಮಾತ್ರ ಭರ್ತಿಯಾಗಿ ಹರಿಯುತ್ತಿದ್ದ ಹಾರಂಗಿ ಅಣೆಕಟ್ಟೆ ಈ ಬಾರಿ ವರ್ಷದಲ್ಲಿ ಎರಡನೇ ಬಾರಿ ಭರ್ತಿಯಾಗಿದೆ. ಇದೇ ಮೊದಲ ಬಾರಿಗೆ ಅಕ್ಟೋಬರ್ ತಿಂಗಳಲ್ಲಿ ಅಣೆಕಟ್ಟೆ ಭರ್ತಿಯಾಗಿ ನದಿಗೆ ಹರಿಸುತ್ತಿರುವುದು ಕಂಡುಬಂದಿದೆ.

ವರ್ಷಂಪ್ರತಿ  ಜುಲೈ ತಿಂಗಳಲ್ಲಿ ಅಣೆಕಟ್ಟೆ ಭರ್ತಿಯಾಗಿ ನದಿಗೆ ಹೆಚ್ಚುವರಿ ನೀರು ಹರಿಸುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ತಿಂಗಳುಗಳಲ್ಲಿ  ಬೇಸಾಯಕ್ಕೆ ಅನುಕೂಲವಾಗುವಂತೆ ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಗಳ ರೈತರಿಗೆ ನಾಲೆಗಳ ಮೂಲಕ ನೀರನ್ನು ಹರಿಸಲಾಗುತ್ತಿದೆ.

ಕೊಡಗಿನ ಮಳೆ ವಿವರ: ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 7.68 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2855.25 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 4040.08 ಮಿ.ಮೀ ಮಳೆಯಾಗಿತ್ತು.                             

ಮಡಿಕೇರಿ ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 3817.56 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 5831.45 ಮಿ.ಮೀ. ಮಳೆಯಾಗಿತ್ತು.   

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 14.47 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2741.33 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 3083.56 ಮಿ.ಮೀ. ಮಳೆಯಾಗಿತ್ತು.  

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 8.57 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2006.88 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 3205.29 ಮಿ.ಮೀ. ಮಳೆಯಾಗಿತ್ತು.  

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ವಿರಾಜಪೇಟೆ ಕಸಬಾ 14.60, ಹುದಿಕೇರಿ 13, ಶ್ರೀಮಂಗಲ 6.80, ಪೊನ್ನಂಪೇಟೆ 18.40, ಅಮ್ಮತ್ತಿ 20, ಬಾಳೆಲೆ 14, ಸೋಮವಾರಪೇಟೆ ಕಸಬಾ 5, ಶನಿವಾರಸಂತೆ 7.20, ಶಾಂತಳ್ಳಿ 11.40, ಕೊಡ್ಲಿಪೇಟೆ 9, ಕುಶಾಲನಗರ 5.60, ಸುಂಟಿಕೊಪ್ಪ 13.20 ಮಿ.ಮೀ. ಮಳೆಯಾಗಿದೆ.       

ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2858.24 ಅಡಿಗಳು, ಕಳೆದ ವರ್ಷ ಇದೇ ದಿನ 2850.33 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 6.60 ಮಿ.ಮೀ., ಇಂದಿನ ನೀರಿನ ಒಳಹರಿವು 1354 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 310 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 750 ಕ್ಯುಸೆಕ್. ನಾಲೆಗೆ 500 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನದಿಗೆ ನಾಲೆಗೆ 1400 ಕ್ಯುಸೆಕ್.