ತಲಕಾವೇರಿಗೆ ಆಗಮ ಪಂಡಿತರ ಭೇಟಿ: ಹಾನಿಗೀಡಾಗಿರುವ ಶಿವಲಿಂಗ ಪರಿಶೀಲನೆ

ತಲಕಾವೇರಿಗೆ ಆಗಮ ಪಂಡಿತರ ಭೇಟಿ: ಹಾನಿಗೀಡಾಗಿರುವ ಶಿವಲಿಂಗ ಪರಿಶೀಲನೆ

CI   ¦    Nov 21, 2020 06:36:40 PM (IST)
ತಲಕಾವೇರಿಗೆ ಆಗಮ ಪಂಡಿತರ ಭೇಟಿ: ಹಾನಿಗೀಡಾಗಿರುವ ಶಿವಲಿಂಗ ಪರಿಶೀಲನೆ

ಮಡಿಕೇರಿ: ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಪ್ರಸ್ತುತ ಹಾನಿಗೀಡಾಗಿರುವ ಶಿವಲಿಂಗವನ್ನು ವಿಸರ್ಜಿಸಬೇಕೋ ಅಥವಾ ಪುನರ್ ಪ್ರತಿಷ್ಠಾಪಿಸಬೇಕೋ ಎನ್ನುವ ಬಗ್ಗೆ ಗೊಂದಲಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರ ಮನವಿ ಮೇರೆಗೆ ರಾಜ್ಯ ಸರ್ಕಾರ ಇಂದು ತಲಕಾವೇರಿ ಕ್ಷೇತ್ರಕ್ಕೆ ಆಗಮ ಪಂಡಿತರನ್ನು ಕಳುಹಿಕೊಟ್ಟಿತ್ತು.

ಸರ್ಕಾರದ ಧಾರ್ಮಿಕ ಪರಿಷತ್ ಸದಸ್ಯರು ಮತ್ತು ಆಗಮ ಪಂಡಿತರೂ ಆದ ಗೋವಿಂದ ಭಟ್ ಹಾಗೂ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ತಲಕಾವೇರಿಯ ಆಗಮ ಪಂಡಿತರಾದ ವಿಜಯಕುಮಾರ್ ಅವರುಗಳು ಭೇಟಿ ನೀಡಿದರು. ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಹಾನಿಗೀಡಾದ ಶಿವಲಿಂಗವನ್ನು ಪರಿಶೀಲಿಸಿದರು.

ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಹಾಗೂ ಭಾಗಮಂಡಲ, ತಲಕಾವೇರಿ ದೇವಾಲಯ ಸಮಿತಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ ಅವರೊಂದಿಗೆ ಆಗಮ ಪಂಡಿತರು ಕ್ಷೇತ್ರದ ಬಗ್ಗೆ ಚರ್ಚಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೀಣಾಅಚ್ಚಯ್ಯ ಅವರು ಹಾನಿಗೀಡಾಗಿರುವ ಶಿವಲಿಂಗವನ್ನು ವಿಸರ್ಜಿಸಬೇಕೆ ಅಥವಾ ಬೇಡವೇ ಎನ್ನುವ ಬಗ್ಗೆ ಕೊಡಗಿನ ಜನರಲ್ಲಿ ಗೊಂದಲ ಮೂಡಿದ್ದು, ಸರ್ಕಾರ ಮಧ್ಯ ಪ್ರವೇಶ ಮಾಡಿ ಸೂಕ್ತ ನಿರ್ಧಾರ ಪ್ರಕಟಿಸಬೇಕೆಂದು ತಾವು ವಿಧಾನ ಪರಿಷತ್ ನಲ್ಲಿ ಮಾಡಿದ ಮನವಿಗೆ ಸ್ಪಂದಿಸಿರುವ ಮುಜರಾಯಿ ಸಚಿವರು ಆಗಮ ಪಂಡಿತರನ್ನು ಕಳುಹಿಸಿಕೊಟ್ಟಿದ್ದಾರೆ ಎಂದರು.

ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಶೀಘ್ರವಾಗಿ ಪ್ರಕರಣ ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.

ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಅವರು ಮಾತನಾಡಿ ಹಾನಿಗೊಳಗಾಗಿರುವ ಯಾವುದೇ ಮೂರ್ತಿಗಳನ್ನು ಪೂಜಿಸುವ ಅವಕಾಶ ಹಿಂದೂ ಧರ್ಮದಲ್ಲಿಲ್ಲ. ಕಪ್ಪುಶಿಲೆಯಿಂದ ನಿರ್ಮಿಸಲಾಗಿರುವ ಶಿವಲಿಂಗ ಹಾನಿಗೀಡಾಗಿದ್ದು, ವಿಸರ್ಜಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು. ಈ ಬಗ್ಗೆ ಈಗಾಗಲೇ ದೇವಾಲಯ ಸಮಿತಿಯಿಂದ ನ್ಯಾಯಾಲಯಕ್ಕೆ ಅಫಿಡಿವಿಟ್ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಆಗಮ ಪಂಡಿತರ ಭೇಟಿ ಸಂದರ್ಭ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಹಾಗೂ ದೇವಾಲಯ ಸಮಿತಿಯ ಪ್ರಮುಖರು ಹಾಜರಿದ್ದರು.