ಕೆ.ಆರ್. ಪೇಟೆ ಉಪ ಚುನಾವಣೆ: ನಾಳೆ ಬಹಿರಂಗ ಪ್ರಚಾರ ಅಂತ್ಯ

ಕೆ.ಆರ್. ಪೇಟೆ ಉಪ ಚುನಾವಣೆ: ನಾಳೆ ಬಹಿರಂಗ ಪ್ರಚಾರ ಅಂತ್ಯ

LK   ¦    Dec 02, 2019 06:35:13 PM (IST)
ಕೆ.ಆರ್. ಪೇಟೆ ಉಪ ಚುನಾವಣೆ: ನಾಳೆ ಬಹಿರಂಗ ಪ್ರಚಾರ ಅಂತ್ಯ

ಮಂಡ್ಯ: ಕೆ.ಆರ್. ಪೇಟೆ ಉಪ ಚುನಾವಣಾ ಬಹಿರಂಗ ಪ್ರಚಾರ ಡಿ.3ರಂದು ಸಂಜೆ 6 ಗಂಟೆಗೆ ಅಂತ್ಯಗೊಳ್ಳಲಿದೆ. ಯಾವುದೇ ರಾಜಕೀಯ ಪಕ್ಷಗಳು ಬಹಿರಂಗ ಪ್ರಚಾರ ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಾಗಿ ಡಿ.5ರಂದು ನಡೆಯಲಿರುವ ಮತದಾನಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಡಿ.5ರ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಬಂದೋಬಸ್ತ್ ಸೇರಿದಂತೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಮತದಾನದ ಮುಕ್ತಾಯದ ಅವಧಿಗೆ 48 ಗಂಟೆಗಳ ಮುಂಚಿತವಾಗಿ ಡಿ.3 ರಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಈ ಅವಧಿಯ ನಂತರ ಯಾರೂ ಪ್ರಚಾರ ಮಾಡುವಂತಿಲ್ಲ. ಮಾತ್ರವಲ್ಲ ಮತದಾರರನ್ನು ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷಗಳ ನಾಯಕರು ಕ್ಷೇತ್ರದಲ್ಲಿ ವಾಸ್ತವ್ಯ ಮಾಡದಂತೆ ನಿರ್ಬಂಧ ಹೇರಲಾಗಿದೆ ಎಂದು ವಿವರಿಸಿದರು.

ಈಗಾಗಲೇ ಕ್ಷೇತ್ರದ ಎಲ್ಲ ಹೊಟೇಲ್ ಹಾಗೂ ವಸತಿನಿಲಯಗಳಿಗೆ ಸೂಚನೆ ನೀಡಿದ್ದು, ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರನ್ನು ನಿರ್ದಾಕ್ಷಿಣ್ಯವಾಗಿ ಕ್ಷೇತ್ರದಿಂದ ಹೊರ ಹಾಕಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

48 ಗಂಟೆಗಳ ಮುಂಚೆ ಯಾವುದೇ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ. ಮತದಾನದ ಮುಕ್ತವಾಗಿ 30 ನಿಮಿಷ ಕಳೆಯುವ ತನಕ ಎಕ್ಸಿಟ್ ಪೋಲ್ ಮಾಡುವ ಹಾಗಿಲ್ಲ. 48 ಗಂಟೆಗಳ ಮುಂಚೆ ಓಪಿನಿಯನ್ ಪೋಲ್ ಮಾಡುವಂತಿಲ್ಲ ಎಂದು ವಿವರಿಸಿದರು.

 

ಕ್ಷೇತ್ರದಲ್ಲಿ 258 ಮತಗಟ್ಟೆಗಳಿವೆ. 290 ಪ್ರಿಸೈಡಿಂಗ್ ಅಧಿಕಾರಿಗಳು, 293 ಸಹಾಯಕ ಮತಗಟ್ಟೆ ಅಧಿಕಾರಿಗಳು, 580 ಮತದಾನ ಅಧಿಕಾರಿಗಳು ಇರುತ್ತಾರೆ. ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ 53 ಮತ್ತು 141ರಲ್ಲಿ 2 ಸಖೀ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗುವುದು. ಇಲ್ಲಿ ಮಹಿಳಾ ಸಿಬ್ಬಂದಿಗಳು ಇರುತ್ತಾರೆ ಎಂದರು.

ಅಂಗವಿಕಲರಿಗಾಗಿ ಮತಗಟ್ಟೆ ಸಂಖ್ಯೆ 128ರಲ್ಲಿ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ. ಅಲ್ಲದೇ ಮತದಾರರಿಗೆ ಮತದಾನ ಮಾಡಲು ಬಂದಾಗ ಸುಂದರ ವಾತಾವರಣ ಕಲ್ಪಿಸಲು ಕೆ.ಆರ್ .ಪೇಟೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 8 ಮತಗಟ್ಟೆಗಳಲ್ಲಿ ಮಾದರಿ ಮತಗಟ್ಟೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿಯೊಂದು ಮತಗಟ್ಟೆಯಲ್ಲಿ 100 ಮೀಟರ್ ವ್ಯಾಪ್ತಿಯಿಂದ ಹೊರಗೆ ಮತದಾರರ ಸಹಾಯಕ ಕೇಂದ್ರ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಚುನಾವಣೆಯಲ್ಲಿ ಎಂ 3 ಮಾದರಿಯ ಇವಿಎಂ ಜೊತೆಗೆ ವಿವಿ ಪ್ಯಾಡ್ ಗಳನ್ನು ಬಳಸಲಾಗುವುದು. ಅಭ್ಯರ್ಥಿಗಳ ಭಾವಚಿತ್ರಗಳನ್ನು ಮುದ್ರಿಸಲಾಗಿದೆ. ಮತಗಟ್ಟೆಗಳಿಗೆ ಮೊಬೈಲ್, ಕ್ಯಾಮರಾಗಳನ್ನು ನಿಷೇಧಿಸಲಾಗಿದೆ. ಈ ಬಾರಿ ಮತದಾನದಲ್ಲಿ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುವುದು. ಅಗತ್ಯವಿವವರಿಗೆ ನೋಟಾ ಮತದಾನ ಮಾಡಲು ಅವಕಾಶವನ್ನು ಕೂಡ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಕ್ಷೇತ್ರದಲ್ಲಿ 52 ಸೂಕ್ಷ್ಮ, 13 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗುವುದು. 10 ಮತಕೇಂದ್ರಗಳಲ್ಲಿ ವೀಡಿಯೋ ಚಿತ್ರೀಕರಣ ಮಾಡಲಾಗುವುದು, 45 ಮತ ಕೇಂದ್ರಗಳಲ್ಲಿ ಮೈಕ್ರೋ ಅಬ್ಸರ್‍ಗಳನ್ನು ನೇಮಕ ಮಾಡಲಾಗುವುದು ಎಲ್ಲಾ ಮತಗಟ್ಟೆಗಳಿಗೂ ಕೇಂದ್ರೀಯ ಅರೆ ಸೇನಾ ಪಡೆಯನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

ಅಭ್ಯರ್ಥಿಗಳು ಮತಗಟ್ಟೆ 200 ಮೀಟರ್ ವ್ಯಾಪ್ತಿಯ ಆಚೆಗೆ ಸಹಾಯಕ ಕೇಂದ್ರಗಳನ್ನು ಸ್ಥಾಪನೆ ಮಾಡಬಹುದು. ಈ ಬೂತ್ ಗಳಲ್ಲಿ ಒಂದು ಮೇಜು, ಒಂದು ಕುರ್ಚಿ ಇಡಲು ಅವಕಾಶ ಮಾಡಿಕೊಡಲಾಗುವುದು.  ಮತದಾನದ ಹಿನ್ನೆಲೆಯಲ್ಲಿ ಡಿ.5 ರಂದು ತಾಲೂಕಿನಾದ್ಯಂತ ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕೆ.ಆರ್ .ಪೇಟೆ ತಾಲೂಕಿನಿಂದ ಹೊರಗಿರುವ ಕಾರ್ಮಿಕರು, ನೌಕರರಿಗೆ ವೇತನ ಸಹಿತ ರಜೆ ನೀಡುವಂತೆ ಎಲ್ಲ ಸರ್ಕಾರಿ, ಖಾಸಗೀ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಡಿಸೆಂಬರ್ 5 ರಂದು ನಡೆಯುವ ಸಂತೆ, ಜಾತ್ರೆ ಉತ್ಸವಗಳನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ನಿಷೇಧಿಸಿ 144ನೇ ಸಕ್ಷನ್ ಜಾರಿ ಮಾಡಲಾಗಿದೆ. ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಡಿಸೆಂಬರ್ 3ರ ಸಂಜೆ 6 ಗಂಟೆಯಿಂದ ಡಿಸೆಂಬರ್ 5ರ ಸಂಜೆ 6 ಗಂಟೆವರೆಗೆ ಕೆ.ಆರ್ .ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದರೆ, ಅಭ್ಯರ್ಥಿಗಳು ಮಾತ್ರ ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದು ಎಂದು ಹೇಳಿದರು.

ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಶಾಂತಿಯುತ ಚುನಾವಣೆಗಾಗಿ ಎಲ್ಲ ರೀತಿಯ ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಮ್ಮ ಅಧಿಕಾರಿಗಳು, ಸಿಬ್ಬಂದಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮದ್ದೂರಿನ ಚೆಕ್ ಪೋಸ್ಟ್‍ನಲ್ಲಿ 52.60 ಲಕ್ಷ ರೂ. ಹಣ ವಶಪಡಿಸಿಕೊಳ್ಳಲಾಗಿದ್ದು, ಇದು ತಮಿಳುನಾಡಿನ ಹೊಸೂರಿನವರಿಗೆ ಸೇರಿದ್ದೆಂದು ಹೇಳಲಾಗಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ತನಿಖೆ ನಡೆಸುವಂತೆ ಸೂಚಿಸಲಾಗಿದ್ದು, ಅಧಿಕಾರಿಗಳು ಅಗತ್ಯ ಕ್ರಮ ವಹಿಸಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 63,54,57 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಭಾನುವಾರ ರಾತ್ರಿ ಸುಮಾರು 7.30ರ ಸಮಯದಲ್ಲಿ ಹಣ ಇರುವ ಕಾರೊಂದನ್ನು ನಿಲ್ಲಿಸಲಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಕ್ಷಣ ತಾಲೂಕು ದಂಡಾಧಿಕಾರಿ, ಪೊಲೀಸ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ತಪಾಸಣೆ ನಡೆಸಲಾಗಿದೆ. ಕಾರಿನಲ್ಲಿ ಯಾವುದೇ ರೀತಿಯ ಹಣ ಹಾಗೂ ಇತರೆ ವಸ್ತುಗಳು ಇಲ್ಲವೆಂದು ತಿಳಿದು ಬಂದಿದ್ದು, ಕಾರು ಹೊಳೇನರಸೀಪುರದವರಿಗೆ ಸೇರಿದ್ದಾಗಿದ್ದು, ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಬಂದಿದ್ದರೆಂದು ಗೊತ್ತಾಗಿದೆ ಎಂದು ತಿಳಿಸಿದರು.

ಡಿ.9ರಂದು ಕೆ.ಆರ್ .ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. 14 ಮತ ಎಣಿಕೆ ಟೇಬಲ್ ವ್ಯವಸ್ಥೆ ಮಾಡಲಾಗಿದೆ. 7.59 ನಿಮಿಷಕ್ಕೆ ಅಂಚೆ ಮತಗಳ ಎಣಿಕೆ ಕೇಂದ್ರ ಆರಂಭವಾಗಲಿದೆ. 11 ಗಂಟೆ ವೇಳೆಗೆ ಫಲಿತಾಂಶದ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ, ಜಿಲ್ಲಾ ವಾರ್ತಾಧಿಕಾರಿ ಹರೀಶ್ ಗೋಷ್ಠಿಯಲ್ಲಿದ್ದರು.