ಮಹಿಳಾ ಕಾಲೇಜು ನಿರ್ಮಾಣಕ್ಕೆ ಅಡ್ಡಿ ಬೇಡ: ಶಾಸಕ ಅಪ್ಪಚ್ಚು ರಂಜನ್ ಮನವಿ

ಮಹಿಳಾ ಕಾಲೇಜು ನಿರ್ಮಾಣಕ್ಕೆ ಅಡ್ಡಿ ಬೇಡ: ಶಾಸಕ ಅಪ್ಪಚ್ಚು ರಂಜನ್ ಮನವಿ

CI   ¦    Jan 14, 2020 07:29:58 PM (IST)
ಮಹಿಳಾ ಕಾಲೇಜು ನಿರ್ಮಾಣಕ್ಕೆ ಅಡ್ಡಿ ಬೇಡ: ಶಾಸಕ ಅಪ್ಪಚ್ಚು ರಂಜನ್ ಮನವಿ

ಮಡಿಕೇರಿ: ಸರಕಾರಿ ಮಹಿಳಾ ಕಾಲೇಜ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರ್ಗದ ವಿದ್ಯಾರ್ಥಿಗಳೇ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಲೇಜು ಕಾಮಗಾರಿಗೆ ಯಾರೂ ಅಡ್ಡಿಪಡಿಸಬಾರದು ಎಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದ್ದಾರೆ.

ಕಾಲೇಜು ಕಟ್ಟಡದ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿದ್ದ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿ, ಗೌಡ ಸಮಾಜದ ಪಕ್ಕದಲ್ಲೇ ಮಹಿಳಾ ಕಾಲೇಜು ನಿರ್ಮಾಣವಾಗುತ್ತಿದ್ದರೂ ವಿದ್ಯಾರ್ಜನೆಗೆ ತೊಂದರೆಯಾಗದಂತೆ ಕಾಲೇಜಿನ ಕಿಟಕಿಗಳಿಗೆ ಸೌಂಡ್ ಪ್ರೂಫ್ ಗಾಜನ್ನು ಅಳವಡಿಸಲಾಗುತ್ತದೆ. ಇದಕ್ಕೆ ಹೆಚ್ಚುವರಿ ಅನುದಾನವನ್ನೂ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮಹಿಳಾ ಕಾಲೇಜನ್ನು ಸ್ವಂತ ಕಟ್ಟಡದಲ್ಲಿ ಆರಂಭಿಸಲು ಕಳೆದ 5 ವರ್ಷಗಳಿಂದ ಸಾಕಷ್ಟು ಕಡೆಗಳಲ್ಲಿ ನಿವೇಶನಗಳನ್ನು ಹುಡುಕಲಾಗುತ್ತಿತ್ತು. ನಗರದ ಹೊರವಲಯದಲ್ಲಿ ಮಹಿಳಾ ಕಾಲೇಜು ನಿರ್ಮಿಸುವುದು ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದು ಚಿಂತಿಸಿ, ನಗರದ ಒಳಗೆ ಸೂಕ್ತ ನಿವೇಶನಕ್ಕೆ ಶೋಧ ನಡೆಸಿದ ಸಂದರ್ಭ ಪಾಳು ಬಿದ್ದಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ವಸತಿ ಸಮುಚ್ಛಯವನ್ನು ಇದಕ್ಕಾಗಿ ಬಳಕೆ ಮಾಡಲು ನಿರ್ಧರಿಸಲಾಯಿತು ಎಂದು ಅಪ್ಪಚ್ಚು ರಂಜನ್ ಹೇಳಿದರು.

ಎರಡು ಅಂತಸ್ತಿನ ಕಾಲೇಜು

ಕಳೆದ 5 ವರ್ಷಗಳ ಹಿಂದೆ ಆರಂಭಗೊಂಡ ಮಹಿಳಾ ಪದವಿ ಕಾಲೇಜಿಗೆ ಸ್ವಂತ ಕಟ್ಟಡ ಹೊಂದುವ ಕನಸಿಗೆ ಇದೀಗ ನನಸಾಗುವ ಕಾಲ ಕೂಡಿ ಬಂದಿದೆ. ನಗರದ ಗೌಡ ಸಮಾಜದ ಹಿಂದೆ 70 ಸೆಂಟ್ಸ್ ಅಳತೆಯ ನಿವೇಶನದಲ್ಲಿ 2 ಅಂತಸ್ತಿನ ಮಹಿಳಾ ಪದವಿ ಕಾಲೇಜು ತಲೆ ಎತ್ತಲಿದ್ದು, ಕಟ್ಟಡ ಕಾಮಗಾರಿಗಾಗಿ ನಿವೇಶನವನ್ನು ಸಮತಟ್ಟು ಮಾಡುವ ಕಾರ್ಯ ಭರದಿಂದ ಸಾಗಿದೆ. 2 ಅಂತಸ್ತಿನ ಕಾಲೇಜು ಕಟ್ಟಡದಲ್ಲಿ ತಲಾ 6 ಕೊಠಡಿಗಳಿರಲಿದ್ದು ಗ್ರಂಥಾಲಯ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಒಳಗೊಂಡಿರಲಿದೆ. ಕೆಳ ಮಹಡಿಯಲ್ಲಿ ವಾಹನ ಪಾರ್ಕಿಂಗ್, ಮೊದಲ ಮಹಡಿಯಲ್ಲಿ ಕಲಾ ವಿಭಾಗ, 2ನೇ ಮಹಡಿಯಲ್ಲಿ ವಾಣಿಜ್ಯ ವಿಭಾಗಗಳು ಕಾರ್ಯ ನಿರ್ವಹಿಸಲಿವೆ.

ಸಂಯುಕ್ತ ಕಾಲೇಜು ನಿರ್ಮಾಣ

ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಆಡಿಟೋರಿಯಂ ಬಳಿ ಸಂಯುಕ್ತ ಕಾಲೇಜು ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, 60 ಸೆಂಟ್ಸ್ ಸ್ಥಳದಲ್ಲಿ ಸಂಯುಕ್ತ ಕಾಲೇಜು ನಿರ್ಮಾಣವಾಗಲಿದೆ. ಈ ಎರಡು ಕಾಲೇಜುಗಳ ನಿರ್ಮಾಣ ಕಾಮಗಾರಿ ಏಕಕಾಲದಲ್ಲಿ ನಡೆಯಲಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಲಭ್ಯವಾಗಲಿದೆ. ಈ ಎರಡೂ ಕಾಲೇಜುಗಳ ನಿರ್ಮಾಣ ಕಾರ್ಯಕ್ಕೆ ರಾಜ್ಯ ಸರಕಾರ ಒಟ್ಟು 4 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಉದ್ದೇಶಿತ ಕಟ್ಟಡದ ನೀಲಿನಕ್ಷೆಯೂ ಸಿದ್ದವಾಗಿದ್ದು, ಸದ್ಯದಲ್ಲಿಯೇ ಕಟ್ಟಡ ಕಾಮಗಾರಿ ಆರಂಭವಾಗಲಿದೆ. ಮಹಿಳಾ ಕಾಲೇಜಿನಲ್ಲಿ 200 ವಿದ್ಯಾರ್ಥಿಗಳು ಹಾಗೂ ಸಂಯುಕ್ತ ಕಾಲೇಜಿನಲ್ಲಿ ಒಟ್ಟು 400 ಮಂದಿ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಲು ಅನುಕೂಲ ಮತ್ತು ಅವಕಾಶ ಕಲ್ಪಿಸಲಾಗುತ್ತಿದೆ.

 ಕಾಮಗಾರಿ ವೀಕ್ಷಣೆ ಸಂದರ್ಭ ಸಂಸದ ಪ್ರತಾಪ್ ಸಿಂಹ, ಮಹಿಳಾ ಕಾಲೇಜ್ ನ ವಿದ್ಯಾರ್ಥಿಗಳು, ಉಪನ್ಯಾಸಕರು, ಅಧಿಕಾರಿಗಳು ಹಾಜರಿದ್ದರು.