ಬಾಲಕಿಗೆ ಕೊರೋನಾ: ಚಿನಕುರಳಿ ಕಂಟೈನ್ಮೆಂಟ್ ಝೋನ್

ಬಾಲಕಿಗೆ ಕೊರೋನಾ: ಚಿನಕುರಳಿ ಕಂಟೈನ್ಮೆಂಟ್ ಝೋನ್

LK   ¦    May 22, 2020 08:12:56 PM (IST)
ಬಾಲಕಿಗೆ ಕೊರೋನಾ: ಚಿನಕುರಳಿ ಕಂಟೈನ್ಮೆಂಟ್ ಝೋನ್

ಪಾಂಡವಪುರ: ತಾಲೂಕಿನ ಚಿನಕುರಳಿಯಲ್ಲಿ ರಾಣೆಬೆನ್ನೂರು ಮೂಲದ ಬಾಲಕಿಗೆ ಕೊರೋನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆಕೆ ತಂದೆ-ತಾಯಿಯೊಂದಿಗೆ ವಾಸವಿದ್ದ ವಾರ್ಡ್‍ನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿರುವುದಾಗಿ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ನಂತರ ಮಾತನಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ಬಾಲಕಿಯ ತಂದೆ ಕಳೆದ ಐದಾರು ವರ್ಷಗಳಿಂದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇಲ್ಲಿಯೇ ವಾಸವಾಗಿದ್ದರು. ಅವರು ಮೂಲತಃ ರಾಣಿಬೆನ್ನೂರಿನ ನಿವಾಸಿಯಾಗಿದ್ದು, ಕಳೆದ ಎರಡು ತಿಂಗಳ ಹಿಂದೆ ಈತ ಕುಟುಂಬ ಸಮೇತ ಯುಗಾದಿ ಹಬ್ಬಕ್ಕೆಂದು ರಾಣಿಬೆನ್ನೂರಿಗೆ ತೆರಳಿದ್ದರು. ಲಾಕ್‍ಡೌನ್ ಆದ ಬಳಿಕ ಎಲ್ಲರು ಸುಮಾರು 2 ತಿಂಗಳ ಕಾಲ ತಮ್ಮೂರಿನಲ್ಲಿಯೇ ವಾಸವಿದ್ದರು. ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್‍ಡೌನ್ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಸ್ವಂತ ಕಾರಿನಲ್ಲಿಯೇ ಹೆಂಡತಿ, ಮಕ್ಕಳ ಸಮೇತ ಚಿನಕುರಳಿಗೆ ವಾಪಸಾಗಿದ್ದರು ಎಂದರು.

ವಿಷಯ ತಿಳಿದು ತಕ್ಷಣವೇ ಎಲ್ಲರನ್ನು ಅವರ ಸಂಬಂಧಿಕರ ಮನೆಯಲ್ಲಿ ಅಧಿಕಾರಿಗಳು ಹೋಂ ಕ್ವಾರೆಂಟೆನ್ ಮಾಡಿದ್ದರು. ಬಳಿಕ ನಾಲ್ಕು ಮಂದಿಯನ್ನು ಸಹ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಹೆಣ್ಣು ಮಗುವಿಗೆ ಕೊರೊನಾ ದೃಢಪಟ್ಟಿದೆ. ಮಗುವಿನ ಪ್ರಾಥಮಿಕ ಸಂಪರ್ಕದಲ್ಲಿದ್ದ ತಂದೆ, ತಾಯಿ ಮತ್ತೊಂದು ಮಗುವಿಗೆ ನೆಗೆಟಿವ್ ಬಂದಿದೆ. ಹಾಗಾಗಿ ಈ ಮಗುವಿಗೆ ಕೊರೋನಾ ಹೇಗೆ ಬಂತು ಎನ್ನುವುದರ ಬಗ್ಗೆ ನಮಗೂ ಅನುಮಾನವಿದ್ದು, ಮತ್ತೊಮ್ಮೆ ಮಗುವನ್ನು ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.

ಮುಂಬೈನಿಂದ ಬರುತ್ತಿರುವವರಿಂದಲೂ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೋನಾ ಬಗ್ಗೆ ಜಿಲ್ಲೆಯ ಜನರು ಎಚ್ಚರದಿಂದ ಇರಬೇಕು. ಈಗಾಗಲೇ  ಕೆ.ಆರ್.ಪೇಟೆ ಸೇರಿದಂತೆ ಜಿಲ್ಲೆ ಗಡಿಭಾಗದಲ್ಲಿ ಬರುವ ಎಲ್ಲಾ ಚೆಕ್‍ ಪೋಸ್ಟ್ ಗಳಲ್ಲೂ ಪರಿಶೀಲಿಸಲಾಗುತ್ತಿದೆ. ನನ್ನ ಪ್ರಕಾರ ಕೊರೋನಾ ಕಡಿಮೆಯಾಗುವವರೆಗೂ ಸರ್ಕಾರ ಲಾಕ್‍ಡೌನ್ ಮುಂದುವರೆಸಿದ್ದರೆ ಒಳ್ಳೆಯದಾಗುತ್ತಿತ್ತು ಎಂದರು.