ಹೆಣ್ಣು ಮಗು ಹುಟ್ಟಿದ್ದಕ್ಕೆ ಮಹಿಳೆಗೆ ಗೃಹ ಬಂಧನ – ಪತಿ ಅತ್ತೆ, ಮಾವ ಅರೆಸ್ಟ್

ಹೆಣ್ಣು ಮಗು ಹುಟ್ಟಿದ್ದಕ್ಕೆ ಮಹಿಳೆಗೆ ಗೃಹ ಬಂಧನ – ಪತಿ ಅತ್ತೆ, ಮಾವ ಅರೆಸ್ಟ್

Apr 08, 2021 09:31:26 AM (IST)
ಹೆಣ್ಣು ಮಗು ಹುಟ್ಟಿದ್ದಕ್ಕೆ ಮಹಿಳೆಗೆ ಗೃಹ ಬಂಧನ – ಪತಿ ಅತ್ತೆ, ಮಾವ ಅರೆಸ್ಟ್

ಹಾವೇರಿ: ಪತಿ ಹಾಗೂ ಆತನ ಮನೆಯವರಿಂದ ಪ್ರತಿದಿನ ಕಿರುಕುಳ ಹಾಗೂ ಮಾನಸಿಕ ದೈಹಿಕ ಹಲ್ಲೆಗೊಳಗಾದ ಗೃಹಿಣಿ ರಕ್ಷಣೆ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲಿರುವ ಘಟನೆ ಶಿಗ್ಗಾಂವ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಅಂಕದ ಕಣದ ನಿವಾಸಿ ಜ್ಯೋತಿ ಶಡಗರವಳ್ಳಿ ಕಿರುಕುಳಕ್ಕೆ ಒಳಗಾಗಿರುವ ಗೃಹಿಣಿ. ನಾಲ್ಕು ವರ್ಷಗಳ ಹಿಂದೆ ಸವಣೂರ ಪಟ್ಟಣದ ಜ್ಯೋತಿ ಬಂಕಾಪುರದ ಶಂಭಾಜಿ ಶಡಗರವಳ್ಳಿ ಯೊಡನೆ ವಿವಾಹವಾಗಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ ಎಂಬ ಕಾರಣದಿಂದ ಕೆಲ ತಿಂಗಳಿನಿಂದ ಪತಿ ಹಾಗೂ ಆತನ ತಂದೆ ತಾಯಿಯ ಸೇರಿ ಗೃಹಿಣಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಾ ಬಂದಿದ್ದಾರೆ. ಶನಿವಾರ ಪತಿ ಹಾಗೂ ಆತನ ತಂದೆ ದುರಗಪ್ಪ, ಆತನ ತಾಯಿ ತಾರಾಬಾಯಿ ಸೇರಿಕೊಂಡು ಜ್ಯೋತಿಯ ಕ್ಷುಲ್ಲಕ ಕಾರಣಕ್ಕೆ ಆವಾಚ್ಯ ಪದಗಳಿಂದ ನಿಂದಿಸಿ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ.
ಜ್ಯೋತಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರದಲ್ಲಿ ಆರು ತಿಂಗಳಿನಿಂದ ಪತಿ, ಅತ್ತೆ ಮತ್ತು ಮಾವ ಸೇರಿಕೊಂಡು ಆಕೆಯನ್ನ ಗೃಹಬಂಧನದಲ್ಲಿ ಇರಿಸಿದ್ದಾರೆ. ಸರಿಯಾಗಿ ಊಟ, ನೀರು ಕೊಡದೆ ಇನ್ನಿಲ್ಲದ ಚಿತ್ರಹಿಂಸೆ ನೀಡಿದ್ದಾರೆ. ಹೆಣ್ಣು ಮಗು ಜನಿಸಿದೆ ಅನ್ನೋದು ಮತ್ತು ತವರುಮನೆಯಿಂದ ವರದಕ್ಷಿಣೆ ತರುವಂತೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ತಡರಾತ್ರಿ ಆಗುತ್ತಿದ್ದಂತೆ ಜ್ಯೋತಿಯನ್ನ ನೀರು ತರೋಕೆ ಕಳಿಸುತ್ತಿದ್ದರಂತೆ. ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ಜರ್ಜರಿತಗೊಂಡಿದ್ದ ಜ್ಯೋತಿ ಕಳೆದ ಕೆಲವು ದಿನಗಳ ಹಿಂದೆ ತಡರಾತ್ರಿ ನೀರು ತರ್ತಿರೋದನ್ನ ಸ್ಥಳೀಯರು ಗಮನಿಸಿದ್ದಾರೆ. ಸ್ಥಳೀಯರು ಜ್ಯೋತಿಯನ್ನ ಗಮನಿಸಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ ಜ್ಯೋತಿಯ ಪತಿ ಶಂಭಾಜಿ, ಅತ್ತೆ ತಾರಾಬಾಯಿ ಮತ್ತು ಮಾವ ದುರಗಪ್ಪ ಆಕೆಯನ್ನ ಮನೆಗೆ ಕರೆತಂದು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಜ್ಯೋತಿಯನ್ನ ಕೊಲೆ ಮಾಡೋಕೆ ಯತ್ನ ಮಾಡಿದ್ದಾರೆ. ಆಗ ಕೂಗಾಟ, ಚೀರಾಟದ ಮೂಲಕ ಜ್ಯೋತಿ ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ.
ಸ್ಥಳೀಯರು ಹಾವೇರಿಯ ಸ್ವಧಾರ ಮಹಿಳಾ ಸಾಂತ್ವನ ಕೇಂದ್ರದವರು ಹಾಗೂ ಬಂಕಾಪುರ ಪೊಲೀಸರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಸ್ವಧಾರ ಕೇಂದ್ರದವರು ಹಾಗೂ ಪೊಲೀಸರು ಜ್ಯೋತಿಗೆ ಗೃಹಬಂಧನದಿಂದ ಮುಕ್ತಿ ಕೊಡಿಸಿ ರಕ್ಷಣೆ ಮಾಡಿದ್ದಾರೆ. ನಂತರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸ್ವಧಾರ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಇನ್ನು ಜ್ಯೋತಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಗೃಹಬಂಧನದಲ್ಲಿಟ್ಟ ಜ್ಯೋತಿಯ ಪತಿ ಶಂಭಾಜಿ, ಅತ್ತೆ ತಾರಾಬಾಯಿ ಮತ್ತು ಮಾವ ದುರಗಪ್ಪನನ್ನ ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ