ಮುಂಬೈನಿಂದ ಮಂಡ್ಯಕ್ಕೆ ಬರುವವರಿಗೆ ಪ್ರವೇಶ ಬಂದ್

ಮುಂಬೈನಿಂದ ಮಂಡ್ಯಕ್ಕೆ ಬರುವವರಿಗೆ ಪ್ರವೇಶ ಬಂದ್

LK   ¦    May 23, 2020 06:04:53 PM (IST)
ಮುಂಬೈನಿಂದ ಮಂಡ್ಯಕ್ಕೆ ಬರುವವರಿಗೆ ಪ್ರವೇಶ ಬಂದ್

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಲು ಮುಂಬೈನಿಂದ ಬಂದ ವಲಸಿಗರೇ ಕಾರಣ ಎನ್ನುವುದು ಗೊತ್ತಿರುವ ವಿಚಾರವೇ ಆಗಿದ್ದು, ಇದೀಗ ಹೆಚ್ಚುತ್ತಿರುವ ಸೋಂಕು ತಡೆಯುವ ಸಲುವಾಗಿ ಮುಂಬೈನಿಂದ ಜಿಲ್ಲೆಗೆ ಪ್ರವೇಶ ಪಡೆಯುವುದನ್ನು ನಿರ್ಬಂಧಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಈ ನಿರ್ದೇಶನ ನೀಡಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳ ಕುರಿತು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮಾಹಿತಿ ನೀಡಿದ್ದು ಈ ಸಂದರ್ಭ ಮುಂಬೈನಿಂದ ವಲಸೆ ಬರುತ್ತಿರುವವರಿಂದಲೇ ಸೋಂಕು ಹೆಚ್ಚಳವಾಗಲು ಕಾರಣವಾಗಿದೆ ಎಂಬ ವಿಚಾರವನ್ನು ತಿಳಿಸಿದ್ದಾರೆ.

ಅಲ್ಲದೆ ಒಟ್ಟು ಪ್ರಕರಣಗಳಲ್ಲಿ ಸುಮಾರು 190ಕ್ಕೂ ಹೆಚ್ಚು ಪ್ರಕರಣಗಳು ಮುಂಬೈನಿಂದಲೇ ಬಂದವರಲ್ಲಿ ಕಾಣಿಸಿಕೊಂಡಿರುವುದಾಗಿ ಅವರು ಸಿಎಂ ಗಮನಕ್ಕೆ ತಂದಿದ್ದಾರೆ. ಈ ವೇಳೆ ಮುಂಬೈ ವಲಸಿಗರ ನಿರ್ಬಂಧಕ್ಕೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ.

ಇನ್ನು ಕೋವಿಡ್-19 ಪರೀಕ್ಷೆಗೆ ಮಾಡಿಕೊಂಡಿರುವ ಲ್ಯಾಬ್ ವ್ಯವಸ್ಥೆ, ಸೋಂಕಿತರಿಗೆ ಚಿಕಿತ್ಸೆ ನೀಡಲು ಲಭ್ಯವಿರುವ ಬೆಡ್‍ಗಳ ವ್ಯವಸ್ಥೆ, ಕೋವಿಡ್ ಸೆಂಟರ್, ಕೋವಿಡ್ ಕಮ್ಯೂನಿಟಿ ಹೆಲ್ತ್ ಸೆಂಟರ್ ಹಾಗೂ ಕ್ವಾರಂಟೈನ್ ಸೆಂಟರ್ ಗಳ ಕುರಿತು ಸಿಎಂ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರಲ್ಲದೆ, ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ವಿವರಿಸಿದ್ದಾರೆ.

ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡುವ ಸಲುವಾಗಿ ಪ್ರತಿ ಗ್ರಾಮಕ್ಕೂ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರ ಜೊತೆ ಆಶಾ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಗಂಟಲು ಕೆರೆತ, ಉಸಿರಾಟದ ತೊಂದರೆ ಸೇರಿದಂತೆ ಇನ್ನಿತರೆ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆಶಾಕಾರ್ಯಕರ್ತರಿಗೆ ಮಾಹಿತಿ ನೀಡುವಂತೆ ತಿಳಿಸಿರುವುದಾಗಿ ಹೇಳಿದರು.

ವಯಸ್ಸಾದವರಲ್ಲಿ ಉಸಿರಾಟದ ತೊಂದರೆ ಇದ್ದರೆ ಮಾಹಿತಿ ನೀಡಬೇಕು. ಅಂತವರ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಕೋವಿಡ್ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ ಚಿಕಿತ್ಸೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಕೋವಿಡ್ ಹರಡಬಾರದು ಎಂಬ ಉದ್ದೇಶದಿಂದ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ.