News Kannada
Tuesday, September 26 2023
ಸಂಪಾದಕರ ಆಯ್ಕೆ

ಭಾರತ – ಚೀನಾ ಯುದ್ಧಕ್ಕೆ ಇಂದಿಗೆ ೬೦ ವರ್ಷ!

19th round of Corps Commander-level meeting between India, China
Photo Credit : Wikimedia

ಹಿಂದೀ ಚೀನಿ ಭಾಯಿ ಭಾಯಿ ಎನ್ನುತ್ತಲೇ ಬೆನ್ನಿಗೆ ಚೂರಿ ಹಾಕಿದ ಚೀನಾದ ಇಬ್ಬಂದಿತನ ಬಯಲುಗೊಂಡು ಇಂದಿಗೆ (ಅ.೨೦) ೬೦ ವರ್ಷ. ಅಂದು ಚೀನಾ ಎರಡು ಕಡೆ ಅನಿರೀಕ್ಷಿತ ದಾಳಿ ನಡೆಸಿತು.

1954ರಲ್ಲಿ, ಚೀನಾ ಹಾಗೂ ಭಾರತಗಳು ಪಂಚಶೀಲ ತತ್ವಗಳನ್ನು ಅಂಗೀಕರಿಸಿದವು. ಅದರಲ್ಲಿ, ಟಿಬೆಟ್‌ನಲ್ಲಿ ಚೀನಾದ ಆಡಳಿತವನ್ನು ಭಾರತ ಮನ್ನಿಸಿತ್ತು. ಆ ಸಂದರ್ಭದಲ್ಲೇ ನೆಹರೂ ‘ಭಾಯಿ-ಭಾಯಿ’ ಮಂತ್ರವನ್ನು ಜಪಿಸಿದ್ದು. 1954ರ ಜುಲೈಯಲ್ಲಿ ಎರಡೂ ದೇಶಗಳ ನಕಾಶೆಗಳನ್ನು ನಿರ್ದಿಷ್ಟಪಡಿಸಿಕೊಳ್ಳೋಣ ಎಂದು ನೆಹರೂ ಕರೆ ನೀಡಿದರು.

ಆದರೆ, ಚೀನಾ ತೋರಿಸಿದ ಮ್ಯಾಪ್‌ಗಳಲ್ಲಿ ಭಾರತದ 1,20,000 ಕಿ.ಮೀ. ಪ್ರದೇಶವನ್ನು ತನ್ನದೆಂದು ತೋರಿಸಿತ್ತು. ಇದನ್ನು ಭಾರತ ಆಕ್ಷೇಪಿಸಿತ್ತು. 1959ರಲ್ಲಿ, ಚೀನಾದ ಕೈಯಿಂದ ತಪ್ಪಿಸಿಕೊಂಡು ಬಂದ ಟಿಬೆಟ್‌ನ ಧರ್ಮಗುರು ದಲಾಯಿ ಲಾಮ ಅವರಿಗೆ ಭಾರತ ಆಶ್ರಯ ನೀಡಿದ್ದು ಚೀನಾವನ್ನು ಕೆರಳಿಸಿತು. ಲ್ಹಾಸಾದಲ್ಲಿ ಉಂಟಾದ ದಂಗೆ ಭಾರತದ ಪ್ರೇರಣೆಯಿಂದ ಆಯ್ತೆಂದು ಮಾವೋ ಹೇಳಿಕೆ ನೀಡಿದರು. ಟಿಬೆಟ್‌ನಲ್ಲಿ ತನ್ನ ಆಡಳಿತಕ್ಕೆ ಭಾರತ ಪ್ರಮುಖ ಅಡ್ಡಿ ಎಂದು ಚೀನಾ ಭಾವಿಸತೊಡಗಿತು.
1962ರ ಬೇಸಿಗೆಯಲ್ಲಿ ಆಗಾಗ ಚೀನಾ- ಭಾರತದ ಸೈನಿಕರ ನಡುವೆ ಸಣ್ಣಪುಟ್ಟ ಚಕಮಕಿಗಳು ನಡೆದವು.

ಅಕ್ಟೋಬರ್‌ 20ರಂದು, ಚೀನಾದ ಸೇನೆ ಭಾರತದ ಎರಡು ಕಡೆಗಳಲ್ಲಿ ನುಗ್ಗಿಬಂತು- ಒಂದು ಪಶ್ಚಿಮದ ಲಡಾಖ್‌ನ ಆಕ್ಸಾಯ್‌ ಚಿನ್‌ ಪ್ರಾಂತ್ಯದಲ್ಲಿ. ಇನ್ನೊಂದು, ಅರುಣಾಚಲ ಪ್ರದೇಶದ ತವಾಂಗ್‌ ಸಮೀಪದ ನಮ್ಕಾ ಚು ನದಿತೀರದಲ್ಲಿ. ಸಿಕ್ಕಿಂನ ನಥುಲಾ ಪ್ರದೇಶದಲ್ಲೂ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆಯಿತಾದರೂ, ಗಡಿಯನ್ನು ಕಾಯ್ದುಕೊಳ್ಳುವಲ್ಲಿ ಭಾರತದ ಸೈನಿಕರು ಸಫಲರಾದರು. ಭಾರತದ ಎರಡು ಡಿವಿಜನ್‌ಗಳು ಮಾತ್ರ ಗಡಿಯಲ್ಲಿದ್ದವು. ಆದರೆ ಚೀನಾದ ಮೂರು ರೆಜಿಮೆಂಟ್‌ಗಳು ಸರ್ವಸನ್ನದ್ಧವಾಗಿ ಬಂದಿದ್ದವು. ದೊಡ್ಡ ಸಂಖ್ಯೆಯ ಭಾರತೀಯ ಸೈನಿಕರನ್ನು ಚೀನಾದವರು ಬಂಧಿಗಳಾಗಿ ಹಿಡಿದಿಟ್ಟುಕೊಂಡರು. ತವಾಂಗ್‌ ಪ್ರದೇಶದಲ್ಲಿ ಯಾವುದೇ ಪ್ರತಿರೋಧವಿಲ್ಲದೆ ಭಾರತೀಯ ಸೇನೆ ಹಿಮ್ಮೆಟ್ಟಿತು. ನಾಲ್ಕು ದಿನಗಳ ಕಾಲ ತೀವ್ರ ಚಕಮಕಿ ನಡೆಯಿತು.

ನಂತರ ಚೀನಾದ ಅಧ್ಯಕ್ಷ ಮಾವೋ ಝೆಡಾಂಗ್‌, ಯುದ್ಧವಿರಾಮಕ್ಕೆ ಪ್ರಸ್ತಾವಿಸಿ ನೆಹರೂಗೆ ಪತ್ರ ಬರೆದರು. ಆದರೆ, ತಾವು ವಶಪಡಿಸಿಕೊಂಡಿದ್ದ ನೆಲದಿಂದ ಹಿಂದೆ ಸರಿಯಲು ಒಪ್ಪಲಿಲ್ಲ. ನೆಹರೂ ಅಷ್ಟರಲ್ಲಾಗಲೇ ಅಮೆರಿಕ ಹಾಗೂ ಇಂಗ್ಲೆಂಡ್‌ನ ನೆರವು ಕೋರಿದ್ದರು. ಆದರೆ, ಅಮೆರಿಕ ಮತ್ತು ರಷ್ಯಾ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನಲ್ಲಿದ್ದುದರಿಂದ, ತಕ್ಷಣಕ್ಕೆ ಸಹಾಯಕ್ಕೆ ಬರಲು ಅವರಿಗೆ ಸಾಧ್ಯವಾಗಲಿಲ್ಲ. ಒಂದು ತಿಂಗಳು ಪರಿಸ್ಥಿತಿ ಹೀಗೇ ಮುಂದುವರಿಯಿತು. ಭಾರತ ಮತ್ತು ಚೀನಾ ಎರಡು ಕಡೆ ಸಾಕಷ್ಟು ಸಾವುನೋವುಗಳಾದವು. ಅಷ್ಟರಲ್ಲಿ ಅಮೆರಿಕದ ವಾಯುಸೇನೆ ಭಾರತದ ನೆರವಿಗೆ ಧಾವಿಸಿ ಬಂತು. ಅಂತಾರಾಷ್ಟ್ರೀಯ ಸಹಕಾರ ಭಾರತಕ್ಕೆ ದೊರೆಯುತ್ತಿದೆ ಎಂದು ಗೊತ್ತಾದ ತಕ್ಷಣ ಚೀನಾ ಏಕಪಕ್ಷೀಯವಾಗಿ ಯುದ್ಧವಿರಾಮ ಘೋಷಿಸಿ, ತಾನು ವಶಪಡಿಸಿಕೊಂಡ ಅರುಣಾಚಲ ಪ್ರದೇಶದ ಭಾಗದಿಂದ ನಿಶ್ಶರ್ತವಾಗಿ ಹಿಂದೆ ಸರಿಯಿತು. ಆದರೆ, ಲಡಾಖ್‌ ಪ್ರಾಂತ್ಯದಲ್ಲಿ ವಶಪಡಿಸಿಕೊಂಡಿದ್ದ ಆಕ್ಸಾಯ್‌ ಚಿನ್‌ ಭಾಗವನ್ನು ಹಾಗೇ ಉಳಿಸಿಕೊಂಡಿತು. ಕದನದಲ್ಲಿ ಭಾರತ 1383 ಸೈನಿಕರನ್ನೂ ಚೀನಾ 722 ಸೈನಿಕರನ್ನೂ ಕಳೆದುಕೊಂಡಿತು.

See also  ಮೈಸೂರು: ಸೆ.26 ರಿಂದ  ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಾರಂಭ

ಗಡಿ ವಿವಾದ
ಎರಡೂ ದೇಶಗಳು 3488 ಕಿ.ಮೀ. ಗಡಿಯನ್ನು ಹಂಚಿಕೊಂಡಿವೆ. ಕೆಲವು ಕಡೆ ನಿರ್ದಿಷ್ಟ ಗಡಿರೇಖೆ ಇನ್ನೂ ಅಂತಿಮಗೊಂಡಿಲ್ಲ. ಲಡಾಖ್‌ನ ಆಕ್ಸಾಯ್‌ ಚಿನ್‌ನಲ್ಲಿ 1962ರ ಯುದ್ಧದಲ್ಲಿ ಚೀನಾ ಆಕ್ರಮಿಸಿಕೊಂಡ ಪ್ರದೇಶವೇ ನೈಜ ನಿಯಂತ್ರಣ ರೇಖೆಯಾಗಿ ಗುರುತಿಸಲ್ಪಡುತ್ತಿದೆ. ಅರುಣಾಚಲ ಪ್ರದೇಶದ 90,000 ಚದರ ಕಿ.ಮೀ. ವಿಸ್ತೀರ್ಣವನ್ನು ಚೀನಾ ದೇಶವು ‘ದಕ್ಷಿಣ ಟಿಬೆಟ್‌’ ಎಂದು ಕರೆದು, ತನ್ನದೆಂದು ವಾದಿಸುತ್ತಿದೆ. ಇದರಲ್ಲಿ ಒಂದಷ್ಟು ಭಾಗವನ್ನು 1962ರ ಯುದ್ಧದಲ್ಲಿ ಅದು ವಶಪಡಿಸಿಕೊಂಡಿದ್ದರೂ, ಬಳಿಕ ನಿಶ್ಶರ್ತವಾಗಿ ಅಲ್ಲಿಂದ ಹಿಂದೆಗೆದಿತ್ತು. 1986ರಿಂದ ಹಲವಾರು ಸುತ್ತಿನ ಮಾತುಕತೆಗಳು ನಡೆಯುತ್ತಿದ್ದರೂ ಇತ್ಯರ್ಥ ಆಗಿಲ್ಲ.

ಅರುಣಾಚಲ ಪ್ರದೇಶ

ಭಾರತಕ್ಕೆ ಕಿರಿಕಿರಿ ಹುಟ್ಟಿಸುವಂತೆ, ಅರುಣಾಚಲ ಪ್ರದೇಶ ಹಾಗೂ ಜಮ್ಮು ಕಾಶ್ಮೀರದ ನಿವಾಸಿಗಳಿಗೆ ಸ್ಟಾಪಲ್ಡ್‌ ವೀಸಾ ಕೊಡುವ ರೂಢಿಯನ್ನು ಚೀನಾ ಆರಂಭಿಸಿತು. ಇದರಿಂದ ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸಿದಂತೆ ಆಗುತ್ತಿದೆ ಎಂದು ಭಾರತ ಚೀನಾಕ್ಕೆ ಪ್ರಬಲ ಪ್ರತಿಭಟನೆ ಒಡ್ಡಿದೆ. 2011ರಲ್ಲಿ ಜಮ್ಮು ಕಾಶ್ಮೀರ ನಿವಾಸಿಗಳಿಗೆ ಇದನ್ನು ನಿಲ್ಲಿಸಿತಾದರೂ, ಅರುಣಾಚಲದವರಿಗೆ ಕೊಡುವುದನ್ನು ಮುಂದುವರಿಸಿತು.

ಮುತ್ತಿನ ಹಾರ
ಭಾರತದ ಸುತ್ತಲಿನ ದೇಶಗಳೊಂದಿಗೆ ವ್ಯೂಹಾತ್ಮಕ ಸಂಬಂಧವನ್ನು ಬೆಸೆಯಲು ಚೀನಾ ಪ್ರಯತ್ನಿಸುತ್ತಿದೆ. ವಾಣಿಜ್ಯ ಚಟುವಟಿಕೆಯ ಹೆದ್ದಾರಿಯಾಗಿ ಅದು ಜಾರಿಗೆ ತರಲು ಯತ್ನಿಸುತ್ತಿರುವ ಒಬಿಒಆರ್‌ ಇಂಥದೊಂದು ಪ್ರಯತ್ನ. ಭಾರತವನ್ನು ಸುತ್ತುವರಿದಿರುವ ಸಮುದ್ರ ಪ್ರದೇಶದಲ್ಲಿ ಬಂದರುಗಳನ್ನು ಹಾಗೂ ನೌಕಾನೆಲೆಗಳನ್ನು ಹೊಂದಲು ಚೀನಾ ಪ್ರಯತ್ನಿಸುತ್ತಿದೆ. ಮ್ಯಾನ್ಮಾರ್‌ನ ಕುಕೂ ದ್ವೀಪದಲ್ಲಿ, ಬಾಂಗ್ಲಾದ ಚಿತ್ತಗಾಂಗ್‌ನಲ್ಲಿ, ಶ್ರೀಲಂಕಾದ ಹಂಬನ್‌ತೋತಾದಲ್ಲಿ, ಮಾಲ್ದೀವ್ಸ್‌ನಲ್ಲಿ, ಪಾಕಿಸ್ತಾನದ ಗ್ವದಾರ್‌ನಲ್ಲಿ ತನ್ನ ನೆಲೆಗಳನ್ನು ಚೀನಾ ಈಗಾಗಲೇ ಹೊಂದಿದೆ. ಇದು ಭಾರತವನ್ನು ಸಂಪೂರ್ಣವಾಗಿ ಸುತ್ತುವರಿದಿದ್ದು, ಭಾರತಕ್ಕೆ ಆತಂಕ ತರುವ ವಿಚಾರವಾಗಿದೆ. ಇದರ ನಡುವೆ, ಚೀನಾದ ಸುತ್ತಲಿನ ದಕ್ಷಿಣ ಕೊರಿಯಾ, ರಷ್ಯಾ, ಜಪಾನ್‌, ವಿಯೆಟ್ನಾಮ್‌ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳನ್ನು ತನ್ನ ಸ್ನೇಹದ ವ್ಯಾಪ್ತಿಯೊಳಗೆ ತಂದು ಚೀನಾದ ನಿದ್ದೆಗೆಡಿಸುವ ತಂತ್ರವನ್ನು ಭಾರತ ಅನುಸರಿಸುತ್ತಿದೆ.

ನದಿ ನೀರು ಹಂಚಿಕೆ
ಚೀನಾ ತನ್ನ ಸುತ್ತಲಿನ ಹೆಚ್ಚಿನೆಲ್ಲ ದೇಶಗಳೊಂದಿಗೆ ನದಿ ನೀರು ವಿಚಾರದಲ್ಲಿ ತಗಾದೆ ಮಾಡಿಕೊಂಡಿದೆ. ಭಾರತ, ಥಾಯ್ಲೆಂಡ್‌, ಲಾವೋಸ್‌, ಕಾಂಬೊಡಿಯಾ, ವಿಯೆಟ್ನಾಮ್‌ಗಳ ನಡುವೆ ನದಿ ವಿವಾದ ಇಟ್ಟುಕೊಂಡಿದೆ. ಬ್ರಹ್ಮಪುತ್ರಾ ನದಿ ನೀರು ಹಂಚಿಕೆಯು ಭಾರತ ಹಾಗೂ ಚೀನಾಗಳ ನಡುವಿನ ಮುಖ್ಯ ನೀರಿನ ತಗಾದೆ. ಬ್ರಹ್ಮಪುತ್ರಾ ನದಿ ಚೀನಾದಲ್ಲಿ ಹುಟ್ಟಿ ಭಾರತದಲ್ಲಿ ಹರಿದು ಬಾಂಗ್ಲಾದಲ್ಲಿ ಸಮುದ್ರವನ್ನು ಸೇರುತ್ತದೆ. ಇದನ್ನು ಚೀನಾದಲ್ಲಿ ತ್ಸಾಂಗ್ಪೋ ನದಿ ಎಂದು ಕರೆಯುತ್ತಾರೆ. ಚೀನಾ ಇದಕ್ಕೆ ಅಣೆಕಟ್ಟುಗಳ ಮೇಲೆ ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ. ಇದಕ್ಕೆ ಭಾರತದ ವಿರೋಧವಿದೆ. ಈ ನದಿ ನೀರಿನ ಹಂಚಿಕೆಯ ಬಗ್ಗೆ ಯಾವುದೇ ಒಪ್ಪಂದಗಳಾಗಿಲ್ಲ. ಜೊತೆಗೆ, ಇಲ್ಲಿ ಶೇಖರಿಸಲಾಗುವ ನೀರಿನ ಪ್ರಮಾಣದ ಬಗ್ಗೆ ಚೀನಾ ಯಾವುದೇ ವಿವರ ನೀಡುತ್ತಿಲ್ಲ. ಇದರಿಂದ ನದಿಪಾತ್ರದ ಕೆಳಗಿನ ರಾಜ್ಯಗಳಾದ ಅರುಣಾಚಲ ಮತ್ತು ಅಸ್ಸಾಂಗಳು ದಿಢೀರ್‌ ನೆರೆಯಂಥ ಪರಿಸ್ಥಿತಿ ಎದುರಿಸಬೇಕಾಗಿದೆ. ಈ ಸಮಸ್ಯೆ ಎದುರಿಸಲು ಭಾರತ ಹನ್ನೆರಡು ಅಣೆಕಟ್ಟುಗಳನ್ನು ಕಟ್ಟಲು ಹೊರಟಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು