ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳ, ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿದ್ದು, ಖಾಸಗಿ ವಿಚಾರಗಳು ಒಂದರ ಮೇಲೊಂದರಂತೆ ಹೊರ ಬರುತ್ತಿದ್ದು, ಜನ ಛೀ.. ಥೂ… ಎಂದು ಉಗಿಯುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ರಾಜಕೀಯದಲ್ಲಿ ಯಾರೂ ಪ್ರಾಮಾಣಿಕರಿಲ್ಲ ಸಾಚಾರೂ ಅಲ್ಲ ಎಂಬುದನ್ನು ಈಗ ಬಯಲಾಗುತ್ತಿರುವ ಖಾಸಗಿ ವಿಚಾರಗಳು ಬಹಿರಂಗಪಡಿಸುತ್ತಿವೆ.
ರಾಜಕೀಯದಲ್ಲಿ ಭ್ರಷ್ಟಾಚಾರ, ಮೋಸ, ವಂಚನೆ ಇದ್ದದ್ದೇ ಆದರೆ ಅದರಾಚೆಗೂ ಸಮಾಜ ಸೇವೆ ಎಂಬ ಹಣೆಪಟ್ಟಿ ಕಟ್ಟಿಕೊಂಡು ಜನರ ಮುಂದೆ ಬರುವ ನಾಯಕರು ವಿಶ್ವಾಸರ್ಹತೆ ಕಳೆದುಕೊಂಡು ಬಿಟ್ಟರೆ ಮುಂದಿನ ಗತಿಯೇನು? ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತೇನೆಂದು ಹೊರಟು ಬಿಟ್ಟರೆ ದೇಶದ ಪರಿಸ್ಥಿತಿ ಏನಾಗಬೇಕು? ನಾಯಕರ ಭ್ರಷ್ಟಾಚಾರ ವಂಚನೆ ಎಲ್ಲವೂ ಗೊತ್ತಿದ್ದರೂ ಆ ಸಮಯದಲ್ಲಿಯೇ ಬಹಿರಂಗಗೊಳಿಸದೆ ಗೌಪ್ಯವಾಗಿಟ್ಟುಕೊಂಡು ಈಗ ಚುನಾವಣಾ ಸಮಯದಲ್ಲಿ ಬಿಚ್ಚಿಡುತ್ತೇನೆಂದು ಹೊರಡುವುದೆಷ್ಟು ಸರಿ? ಇದು ಕೂಡ ಮತದಾರರ ಸೆಳೆಯುವ ತಂತ್ರವಾದರೂ ದೇಶಕ್ಕೆ ಮಾಡುವ ದ್ರೋಹ ಎನ್ನುವುದರಲ್ಲಿ ಎರಡು ಮಾತಿಲ್ಲ.
ದೇಶದ, ಜನರ ಬಗ್ಗೆ ಕಾಳಜಿ ಇದ್ದರೆ ದೇಶದ್ರೋಹ ಮಾಡುವ, ಭ್ರಷ್ಟಾಚಾರ ನಡೆಸುವ, ವಸೂಲಿ ಮಾಡುವ ನಾಯಕನನ್ನು ಕಾನೂನು ಮೂಲಕವೇ ಶಿಕ್ಷೆಗೆ ಗುರಿಪಡಿಸುವ ಕೆಲಸ ಮಾಡದೆ ಕೇವಲ ಆರೋಪಗಳನ್ನು ಮಾಡುತ್ತಾ ದಿನಕಳೆಯುವುದೆಷ್ಟು ಸರಿ? ಯಾವುದೇ ವಿಚಾರಗಳ ಬಗ್ಗೆ ಆಗ ಸೊಲ್ಲೆತ್ತದವರು ಈಗ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಮಾತನಾಡುತ್ತಿರುವುದು ಜನರಿಗೆ ಮಾಡುತ್ತಿರುವ ದ್ರೋಹವಲ್ಲವೆ? ಪ್ರತಿಯೊಬ್ಬ ರಾಜಕಾರಣಿಯೂ ತಮ್ಮ ರಾಜಕೀಯ ಹಿತಾಸಕ್ತಿಗನುಗುಣವಾಗಿ ಏನು ಮಾಡಿದರೆ ತಮಗೆ ಲಾಭವಾಗಬಹುದು ಎಂಬ ದೃಷ್ಠಿಕೋನದಿಂದ ಮಾತನಾಡುತ್ತಿದ್ದಾರೆಯೇ ವಿನಃ ಯಾರಿಗೂ ಈ ಸಮಾಜದ ಬಗ್ಗೆ ಕಾಳಜಿ ಇಲ್ಲ ಎನ್ನುವುದು ಇವತ್ತಿನ ರಾಜಕಾರಣಿಗಳ ನಡೆಯಿಂದ ಗೊತ್ತಾಗುತ್ತಿದೆ.
ಚುನಾವಣೆಯಿಂದ ಚುನಾವಣೆಗೆ ರಾಜಕೀಯದ ಪರಿಸ್ಥಿತಿಗಳು ಹದಗೆಡುತ್ತಾ ಹೋಗುತ್ತಿವೆ. ನೋಟು ಹೊಡೆದು ಓಟು ಪಡೆಯುವ ವಾತಾವರಣ ನಿರ್ಮಾಣವಾಗುತ್ತಿದೆ. ಜಾತ್ರೆ, ಹುಟ್ಟುಹಬ್ಬ ಪೂಜೆ ನೆಪಗಳಲ್ಲಿ ಜನರನ್ನು ಸೇರಿಸಿ ಭೂರಿ ಭೋಜನ ನೀಡುವ, ಉಡುಗೊರೆಗಳನ್ನು ಕೊಡುವ, ಜನರನ್ನು ಯಾತ್ರೆಗಳಿಗೆ ಕಳುಹಿಸುವ, ಸಮಾವೇಶಗಳಿಗೆ ಜನರನ್ನು ಹಣಕೊಟ್ಟು ಕರೆಸುವ ಸಂಸ್ಕೃತಿ ಹುಟ್ಟಿಕೊಳ್ಳುತ್ತಿದೆ. ಹಣ ಮತ್ತು ಊಟ ಸಿಗುತ್ತದೆ ಎಂಬ ಕಾರಣಕ್ಕೆ ಜನ ರಾಜಕೀಯ ಸಮಾವೇಶಗಳಿಗೆ ತೆರಳುತ್ತಿರುವುದರಿಂದ ಹೊಲಗದ್ದೆ, ತೋಟಗಳಲ್ಲಿ ಕೆಲಸಕ್ಕೆ ಜನರಿಲ್ಲದೆ ಪರದಾಡುವಂತಾಗಿದೆ.
ಮೊದಲೆಲ್ಲ ಮತಕೇಳಿಕೊಂಡು ಬರುವವರಲ್ಲಿ ನಮ್ಮ ಬೀದಿಗೆ, ಊರಿಗೆ ಏನು ಮಾಡಿಕೊಡ್ತೀರಾ ಎಂದು ಕೇಳುತ್ತಿದ್ದ ಜನ ಈಗ ಸ್ವಾರ್ಥಿಗಳಾಗುತ್ತಿದ್ದಾರೆ. ನಮ್ಮ ಮನೆಯಲ್ಲಿ ಇಷ್ಟು ಓಟು ಇದೆ ಎಷ್ಟು ಕೊಡಿಸುತ್ತೀರಾ? ಎಂದು ಕೇಳುವ ಮಟ್ಟಕ್ಕೆ ಇಳಿದಿದ್ದಾರೆ. ಇದಕ್ಕೆಲ್ಲ ಕಾರಣರು ಯಾರು? ನಮ್ಮ ರಾಜಕೀಯ ನಾಯಕರು ತಾನೆ? ಆಸೆ ಆಮಿಷವೊಡ್ಡಿ ಮತ ಪಡೆಯುವವರಿಂದ ಜನ ಏನು ನಿರೀಕ್ಷೆ ಮಾಡಲು ಸಾಧ್ಯ. ಅದರ ಪರಿಣಾಮಗಳಿಂದಾಗಿಯೇ ರಾಜಕಾರಣಿಗಳು ಕೋಟಿಕುಳಗಳಾಗುತ್ತಿದ್ದಾರೆ. ಮತಕೊಟ್ಟ ಜನರ ಬದುಕು ಮೂರಾಬಟ್ಟೆಯಾಗುತ್ತಿದೆ.
ಮೊದಲೆಲ್ಲ ಚುನಾವಣೆಗೆ ಅಭಿವೃದ್ಧಿ ವಿಚಾರಗಳಷ್ಟೆ ಬಹು ಮುಖ್ಯವಾಗುತ್ತಿದ್ದವು. ಈಗ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಭಾವನಾತ್ಮಕ ವಿಚಾರಗಳು, ಆಡಿಯೋ, ಸಿಡಿ ವಿಚಾರಗಳು ಕೂಡ ಮುನ್ನಲೆಗೆ ಬರುತ್ತಿವೆ. ಕೆಲವರ ಖಾಸಗಿ ವಿಚಾರಗಳು ಕೂಡ ಮತ ತಂದುಕೊಡುವ ಸಾಧನಗಳಾಗುತ್ತಿವೆ. ಬ್ಲಾಕ್ ಮೇಲ್, ಹನಿಟ್ರ್ಯಾಪ್ ಕೆಲವು ನಾಯಕರ ಬಾಯಿ ಮುಚ್ಚಿಸಿವೆ. ಚುನಾವಣೆ ಘೋಷಣೆಯಾಗಿ ಫಲಿತಾಂಶ ಬರುವ ಹೊತ್ತಿಗೆ ಅದೆಷ್ಟು ನಾಯಕರ ಖಾಸಗಿ ವಿಚಾರಗಳು ಬಯಲಿಗೆ ಬರಲಿವೆಯೋ ಗೊತ್ತಿಲ್ಲ. ಮುಂದೆ ನಡೆಯುವುದೆಲ್ಲವೂ ದ್ವೇಷದ ರಾಜಕಾರಣವಾಗಿರುವುದರಿಂದ ಒಬ್ಬರನೊಬ್ಬರು ಸಮಾಜದ ಮುಂದೆ ಬೆತ್ತಲಾಗುವುದಂತು ಖಚಿತ.
ರಾಜಕೀಯ ನಾಯಕರು ಯಾವುದೇ ಆಸೆ ಆಮಿಷವೊಡ್ಡಿದರೂ ಅಂತಿಮವಾಗಿ ಝೀರೋ ಆಗಿದ್ದ ವ್ಯಕ್ತಿಯನ್ನು ಹೀರೋ ಮಾಡುವ ತಾಕತ್ ಇರುವುದು ಮತದಾರನಿಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಐದು ವರ್ಷಕ್ಕೊಮ್ಮೆ ಪ್ರಜಾಪ್ರಭುತ್ವದ ಪ್ರಭುವಾಗುವ ಮತದಾರರು ಯೋಚನೆ ಮಾಡಿದರೆ ಕೊಬ್ಬಿನಿಂದ ಮೆರೆಯುವವರಿಗೆ ಪಾಠ ಕಲಿಸಿ ಉತ್ತಮರನ್ನು ಆಯ್ಕೆ ಮಾಡುವುದು ಕಷ್ಟವೇನಲ್ಲ. ಎಲ್ಲವೂ ಮತದಾರರ ಕೈಯ್ಯಲ್ಲಿದೆ ಆ ನಿಟ್ಟಿನಲ್ಲಿ ಯೋಚಿಸಬೇಕಷ್ಟೆ.