News Kannada
Thursday, March 30 2023

ಸಂಪಾದಕರ ಆಯ್ಕೆ

ಡಿಜಿಟಲ್ ಉರುಳುಗಳ ಕುರಿತಂತೆ ಜಾಗೃತಿ ಅಗತ್ಯ

Need for awareness about digital rolls
Photo Credit : Freepik

ಇತ್ತೀಚೆಗೆ ಪತ್ರಿಕೆಗಳಲ್ಲಿ ಒಬ್ಬ ಯುವಕನ ಆತ್ಮಹತ್ಯೆ ಸುದ್ದಿಯಾಯಿತು. ಇನ್ ಸ್ಟಾಗ್ರಾಂನಲ್ಲಿ ಈ ವಿದ್ಯಾರ್ಥಿಗೆ ತರುಣಿಯೊಬ್ಬಳು ಪರಿಚಯವಾಗಿದ್ದಾಳೆ. ಪರಿಚಯ ಆತ್ಮೀಯತೆಗೆ ತಿರುಗಿ ವೀಡಿಯೊ ಚಾಟಿಂಗ್ ಕೂಡ ನಡೆದಿದೆ. ಇದಾದ ಕೆಲವೇ ದಿನಗಳಲ್ಲಿ ಈ ವಿದ್ಯಾರ್ಥಿಯ ಅಶ್ಲೀಲ ವೀಡಿಯೊ ಜೊತೆಗೆ ಅಪರಿಚಿತರು ಬ್ಲ್ಯಾಕ್‌ ಮೇಲ್ ಮಾಡಲು ಶುರು ಹಚ್ಚಿದ್ದಾರೆ. ಆತನಿಗೆ ಹಣದ ಬೇಡಿಕೆ ಮುಂದಿಟ್ಟಿದ್ದಾರೆ. ಅವರು ಕೇಳಿದಷ್ಟು ಹಣವನ್ನು ವಿದ್ಯಾರ್ಥಿ ಎಲ್ಲಿಂದ ತಂದುಕೊಡಬೇಕು? ಅಶ್ಲೀಲ ವೀಡಿಯೊ ಬಹಿರಂಗವಾದರೆ ಸ್ನೇಹಿತರು, ಕುಟುಂಬಸ್ಥರ ಮುಂದೆ ಮಾನ ಹರಾಜಾಗುವ ಭಯ. ಅಂತಿಮವಾಗಿ ಆತ ಆತ್ಮಹತ್ಯೆಯ ಮೊರೆ ಹೋಗುತ್ತಾನೆ. ಇಂತಹ ಘಟನೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಯಾರೋ ಎಲ್ಲೋ ಕುಳಿತು ಹೆಣೆದ ಬಲೆಗೆ ಹಿಂದು ಮುಂದು ಅರಿಯದ ವಿದ್ಯಾರ್ಥಿಗಳೇ ಹೋಗಿ ಬೀಳುತ್ತಿದ್ದಾರೆ. ಈಗಾಗಲೇ ಬಲೆಗೆ ಬಿದ್ದು ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವರು ಯಾರಲ್ಲೂ ಹೇಳಲಾಗದೆ ಒಳಗೊಳಗೆ ಕೊರಗುತ್ತಿದ್ದಾರೆ. ಕೆಲವರು ಮನೆಯಲ್ಲೇ ಕಳ್ಳತನಗೈದು ಅಪರಿಚಿತರಿಗೆ ಹಣವನ್ನು ಕೇಳಿದಂತೆಯೇ ನೀಡುತ್ತಿದ್ದಾರೆ. ಈ ಸೈಬರ್ ಕೈಂಗಳನ್ನು ತಡೆಯಲು ಪೊಲೀಸರು ಕೂಡ ಅಸಹಾಯಕರಾಗಿದ್ದಾರೆ.

ಜೊತೆಗೆ, ಇತ್ತೀಚಿನ ದಿನಗಳಲ್ಲಿ ಹೈಸ್ಕೂಲ್ ಓದುತ್ತಿರುವ ಹುಡುಗ, ಹುಡುಗಿಯರು ಮೊಬೈಲ್ ಕಾರಣದಿಂದ ಆತ್ಮಹತ್ಯೆ ಗೈಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಪೋಷಕರು ಮೊಬೈಲ್ ಕೊಡಲಿಲ್ಲ ಎಂದೋ, ಮೊಬೈಲ್‌ನಲ್ಲಿ ಆಡಲು ಬಿಡಲಿಲ್ಲ ಎಂದೋ ಅಥವಾ ಮೊಬೈಲ್‌ನಲ್ಲಿ ಆಟವಾಡಿದ್ದಕ್ಕೆ ನಿಂದಿಸಿದರೆಂದೋ ಸಿಟ್ಟಿಗೆದ್ದು ಆತ್ಮಹತ್ಯೆ ಮಾಡುತ್ತಿರುವ ಈ ಎಳೆ ಜೀವಗಳ ಕುರಿತಂತೆ ಪತ್ರಿಕೆಗಳಲ್ಲಿ ಪದೇ ಪದೇ ವರದಿಗಳು ಪ್ರಕಟವಾಗುತ್ತಿರುತ್ತವೆ. ಪರಿಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ, ಮೊಬೈಲ್ ಆಡದಂತೆ ಅಥವಾ ಬಳಸದಂತೆ ವಿದ್ಯಾರ್ಥಿಗಳಿಗೆ ಜೋರು ಮಾತಿನಲ್ಲಿ ಆದೇಶ ನೀಡಲೂ ಹೆದರುವಂತಾಗಿದೆ. ಮೊಬೈಲ್ ಚಟವನ್ನು ಅಂಟಿಸಿಕೊಂಡು ಅದರಿಂದ ಹೊರಬರಲಾಗದೇ ಒದ್ದಾಡುತ್ತಿರುವ ತಮ್ಮ ಮನೆ ಮಕ್ಕಳನ್ನು ರಕ್ಷಿಸುವ ವಿಧಾನ ಅರಿಯದೆ ಪೋಷಕರು ಅಸಹಾಯಕರಾಗಿದ್ದಾರೆ. ಬದುಕು ಏನು ಎನ್ನುವುದನ್ನು ಸರಿಯಾಗಿ ಕಣ್ಣು ತೆರೆದು ನೋಡುವ ಮುನ್ನವೇ ಮೊಬೈಲ್‌ ಉರುಳಿಗೆ ಕೊರಳೊಡ್ಡಿಕೊಳ್ಳುತ್ತಿರುವ ಸಂಖ್ಯೆ ಹೆಚ್ಚುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಮೊಬೈಲ್‌ ಚಟವನ್ನು ಅಂಟಿಸಿಕೊಂಡು, ಶೈಕ್ಷಣಿಕವಾಗಿ ಸಂಪೂರ್ಣ ವಿಫಲವಾಗಿ ಖಿನ್ನತೆಯಿಂದ ನರಳುವ ವಿದ್ಯಾರ್ಥಿಗಳ ಸಂಖ್ಯೆಯೂ ದೊಡ್ಡದಿದೆ.

ಇನ್ನೊಂದು ವರ್ಗವಿದೆ. ಕೆಲವು ಆ್ಯಪ್‌ಗಳಲ್ಲಿ ಸಾಲವನ್ನು ಪಡೆದು ಅದನ್ನು ತೀರಿಸಲಾಗದೆ, ಕಟ್ಟ ಕಡೆಗೆ ಇವರಿಂದ ಬ್ಲ್ಯಾಕ್‌ ಮೇಲ್‌ಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಒಂದು ವರ್ಗ. ಈ ಆ್ಯಪ್‌ಗಳ ಕುರಿತಂತೆ ಈಗಾಗಲೇ ಪೊಲೀಸ್‌ ಇಲಾಖೆ ಎಚ್ಚರಿಕೆಯನ್ನು ನೀಡಿದೆಯಾದರೂ, ಆರ್ಥಿಕವಾಗಿ ಕಂಗೆಟ್ಟ ಕೆಲವರು ತಾವಾಗಿಯೇ ಈ ಆ್ಯಪ್‌ಗಳ ಕುಣಿಕೆಗೆ ಕೊರಳೊಡ್ಡಿಕೊಳ್ಳುತ್ತಿದ್ದಾರೆ. ಕೊರೋನ ಮತ್ತು ಲಾಕ್‌ ಡೌನ್ ಬಳಿಕ ಜನಸಾಮಾನ್ಯರು ತೀವ್ರ ಆರ್ಥಿಕ ಮುಗ್ಗಟ್ಟನ್ನು ಅನುಭವಿಸುತ್ತಿದ್ದಾರೆ. ‘ತಕ್ಷಣಕ್ಕೆ ಸಮಸ್ಯೆ ಪರಿಹಾರವಾದರೆ ಸಾಕು, ಮುಂದಿನದನ್ನು ಮತ್ತೆ ನೋಡಿಕೊಳ್ಳೋಣ’ ಎಂಬ ಮನಸ್ಥಿತಿಯಿಂದ ಇಂತಹ ಆ್ಯಪ್‌ಗಳಿಂದ ಸಾಲವನ್ನು ಪಡೆಯುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಖಾಸಗಿ ಮಾಹಿತಿಗಳನ್ನು, ಡಾಟಾಗಳನ್ನು ಅವರು ಸಾಲದಾತರಿಗೆ ನೀಡುತ್ತಾರೆ. ಅಸಲು, ಬಡ್ಡಿ, ಚಕ್ರಬಡ್ಡಿ ಕಟ್ಟದ ಬಳಿಕವೂ ಸಾಲ ತೀರುವುದಿಲ್ಲ. ಕೆಲವೊಮ್ಮೆ ಸಾಲವನ್ನು ತೀರಿಸಿದರೂ, ಈ ಆ್ಯಪ್‌ನ ಹಿಂದಿರುವ ಶಕ್ತಿಗಳು ಸಾಲ ಪಡೆದವರ ಖಾಸಗಿ ಮಾಹಿತಿಗಳನ್ನು ಮುಂದಿಟ್ಟು ಬ್ಲ್ಯಾಕ್ ಮೇಲ್‌ ಮಾಡುತ್ತಿರುತ್ತಾರೆ. ಇಂತಹ .ಕ್‌ಮೇಲ್‌ ಗಳಿಗೆ ಹೆದರಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ವಿರುದ್ಧ ಪೊಲೀಸರಿಗೆ ದೂರು ನೀಡಿದರೂ, ಪೊಲೀಸರು ಈ ಆ್ಯಪ್‌ಗಳ ಹಿಂದಿರುವ ವಂಚಕರ ಜಾಲವನ್ನು ಬೇಧಿಸಲಾಗದೆ ಕೈ ಚೆಲ್ಲುತ್ತಿದ್ದಾರೆ. ಇವೆಲ್ಲದರ ಜೊತೆಗೆ ಎಟಿಎಂ, ಬ್ಯಾಂಕ್‌ ಖಾತೆಗಳ ಮಾಹಿತಿಗಳನ್ನು ಪಡೆದು ವಂಚಿಸುವ ಪಡೆಗಳು ಬೇರೆಯೇ ಇವೆ.

See also  ಕರ್ನಾಟಕ: ನಡೆದ 3 ಕೊಲೆಗಳು ಕೋಮುವಾದ ತಿರುವು ಪಡೆದಿದ್ದು, ಎಚ್ಚೆತ್ತ ಪೊಲೀಸರು!

ನೋಟು ನಿಷೇಧದ ಬಳಿಕ ಡಿಜಿಟಲ್ ಬ್ಯಾಂಕಿಂಗ್‌ಗೆ ಆದ್ಯತೆಯನ್ನು ನೀಡಲಾಯಿತು. ಜನರು ಕೈಯಲ್ಲೊಂದು ಸ್ಟಾರ್ಟ್‌ಫೋನ್ ಇಟ್ಟುಕೊಳ್ಳುವುದು, ‘ಆಧಾರ್ ಕಾರ್ಡ್’ನಷ್ಟೇ ಅನಿವಾರ್ಯ ಎನ್ನುವ ವಾತಾವರಣ ನಿರ್ಮಾಣವಾಯಿತು. ಬ್ಯಾಂಕ್‌ ವ್ಯವಹಾರಗಳ ಬಗ್ಗೆಯೂ ಪೂರ್ಣ ಪ್ರಮಾಣದಲ್ಲಿ ಸಾಕ್ಷರರಲ್ಲದ ಸಮಾಜ ಮೇಲೆ ಡಿಜಿಟಲ್ ಬ್ಯಾಂಕಿಂಗ್‌ನ್ನು ಏಕಾಏಕಿ ಹೇರುವುದು ಏನೆಲ್ಲ ಅನಾಹುತ ಸೃಷ್ಟಿಸಬಹುದು ಎನ್ನುವುದಕ್ಕೆ ಸಮಾಜ ಇಂದು ಸಾಕ್ಷಿಯಾಗುತ್ತಿದೆ. ಇದರ ಜೊತೆಗೆ ಲಾಕ್‌ಡೌನ್‌ ಅವಧಿಯಲ್ಲಿ ಶಿಕ್ಷಣವನ್ನು ಆನ್‌ಲೈನ್‌ನಲ್ಲಿ ಬೋಧಿಸಬೇಕಾದ ಸ್ಥಿತಿ ನಿರ್ಮಾಣವಾಯಿತು. ಶಾಲೆಗಳಲ್ಲೇ ಸರಿಯಾದ ಶಿಕ್ಷಣ ವ್ಯವಸ್ಥೆ ಇಲ್ಲದೇ ಇರುವ ದೇಶದಲ್ಲಿ ಆನ್‌ಲೈನ್ ಶಿಕ್ಷಣವೆನ್ನುವ ಬಹುದೊಡ್ಡ ಅಣಕವೊಂದು ನಡೆಯಿತು. ಈ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ಅದೆಷ್ಟು ಶಿಕ್ಷಿತರಾದರು ಎನ್ನುವುದನ್ನು ಈಗಾಗಲೇ ಬೇರೆ ಬೇರೆ ಅಧ್ಯಯನ ವರದಿಗಳು ಬಹಿರಂಗಪಡಿಸಿವೆ. ಆದರೆ ಮಕ್ಕಳ ಕೈಗೆ ಮೊಬೈಲ್‌ ನೀಡುವುದು ಪೋಷಕರಿಗೆ ಅನಿವಾರ್ಯವಾಗಿಸಿದ್ದು ಆನ್‌ಲೈನ್‌ ಶಿಕ್ಷಣ. ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ಅಧಿಕೃತವಾಗಿ ಮೊಬೈಲ್ ಬಳಕೆಯ ಹಕ್ಕನ್ನು ವಿದ್ಯಾರ್ಥಿಗಳು ಪಡೆದರು. ಅಂದು ಅವರ ಕೈವಶವಾಗಿರುವ ಮೊಬೈಲ್‌ಗಳನ್ನು ಮರುವಶ ಮಾಡಿಕೊಳ್ಳಲು ಪೋಷಕರು ಇಂದಿಗೂ ವಿಫಲರಾಗಿದ್ದಾರೆ.

ಮೊಬೈಲ್‌, ಇಂಟರ್‌ ನೆಟ್‌ಗಳ ಕುರಿತಂತೆ ಯುವಕರಲ್ಲಿ ಜಾಗೃತಿಯನ್ನು ಮೂಡಿಸುವುದು ತುರ್ತಾಗಿ ನಡೆಯಬೇಕಾಗಿದೆ. ಗಾಂಜಾ, ಡ್ರಗ್ಸ್‌ನಂತಹ ಚಟಕ್ಕೆ ಸಿಕ್ಕಿ ಸರ್ವನಾಶವಾಗುವಂತೆಯೇ ಯುವ ಸಮೂಹ ಈ ಸೈಬರ್ ಸಹವಾಸಕ್ಕೆ ತಮ್ಮ ಭವಿಷ್ಯವನ್ನು ತೆತ್ತುಕೊಳ್ಳುತ್ತಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ. ಕನಿಷ್ಠ ಇದಕ್ಕಾಗಿ ವಾರಕ್ಕೊಂದು ತರಗತಿಯನ್ನಾದರೂ ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಬೇಕು. ಹಾಗೆಯೇ, ಇಂತಹ ಬ್ಲ್ಯಾಕ್‌ ಮೇಲ್‌ಗೆ ಒಳಗಾದರೆ ವಿದ್ಯಾರ್ಥಿಗಳ ಮುಂದಿನ ನಡೆ ಹೇಗಿರಬೇಕು ಎನ್ನುವ ಬಗ್ಗೆಯೂ ಮಾರ್ಗದರ್ಶನವನ್ನು ನೀಡಬೇಕು. ಹಾಗೆಯೇ ಮೊಬೈಲ್ ಚಟ ಹೊಂದಿದ ವಿದ್ಯಾರ್ಥಿಗಳ ಜೊತೆಗೆ ಪೋಷಕರು ಹೇಗೆ ವ್ಯವಹರಿಸಬೇಕು, ಅದರಿಂದ ಹೊರಗೆ ತರಲು ವೈದ್ಯರ ನೆರವನ್ನು ಹೇಗೆ ಪಡೆಯಬಹುದು ಎನ್ನುವುದರ ಬಗ್ಗೆಯೂ ಅರಿವನ್ನು ಮೂಡಿಸುವ ಕೆಲಸ ಶಿಕ್ಷಕರಿಂದಾಗಬೇಕು. ಹಾಗೆಯೇ ಸೈಬರ್ ಕ್ರೈಮ್‌ಗಳು ನಡೆದರೆ ಅದನ್ನು ತಡೆಯುವುದು ನಮ್ಮ ಹೊಣೆಗಾರಿಕೆಯಲ್ಲ ಎನ್ನುವ ಮನಸ್ಥಿತಿಯನ್ನು ಪೊಲೀಸರೂ ಹೊಂದಿದ್ದಾರೆ. ಸಂತ್ರಸ್ತರನ್ನೇ ಹೊಣೆ ಮಾಡಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಪೊಲೀಸರಿಂದಾಗಿ ಇಂತಹ ಅಕ್ರಮಗಳು ಇನ್ನಷ್ಟು ಹೆಚ್ಚುತ್ತಿವೆ. ಅಪರಾಧ ಜಗತ್ತು ತನ್ನ ಗಡಿಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ, ಅದನ್ನು ತಡೆಯಬೇಕಾದ ಪೊಲೀಸ್‌ ಇಲಾಖೆ ಕೂಡ ಹೆಚ್ಚು ಆಧುನಿಕವಾಗಬೇಕಾಗಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ, ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿದ್ದು ಅವರನ್ನು ತಡೆಯಬೇಕಾಗಿದೆ.

-ಮಣಿಕಂಠ ತ್ರಿಶಂಕರ್, ಮೈಸೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

34905
ಮಣಿಕಂಠ ತ್ರಿಶಂಕರ್

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು