ಮಂಗಳೂರು: ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದೇ ಹೊತ್ತಿನಲ್ಲಿ ರಾಜ್ಯದ ಹಿರಿಯ ಮಹಿಳಾ ಐಪಿಎಸ್, ಐಎಎಸ್ ಅಧಿಕಾರಿಗಳ ಕಿತ್ತಾಟ, ಜಾಲತಾಣಗಳಲ್ಲಿ ಜಬರ್ದಸ್ತ್ ವಾರ್ ನಡೆಯುತ್ತಿದ್ದರೂ ಸರ್ಕಾರದ ನಿಧಾನಗತಿ ಕ್ರಮ ಆಡಳಿತ ಯಂತ್ರದ ನಿಷ್ಕ್ರಿಯತೆ ಸಾಕ್ಷಿಯಾಗಿದ್ದು ಸುಳ್ಳಲ್ಲ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪ ಮೌದ್ಗಿಲ್ ನಡುವಣ ಸಂಘರ್ಷ ತಾರಕಕ್ಕೇರಿದ್ದು, ಈ ಬೆನ್ನೆಲ್ಲೆ ಎಚ್ಚೆತ್ತ ರಾಜ್ಯ ಸರ್ಕಾರ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶಿಸಿದೆ. ರೋಹಿಣಿ ಸಿಂಧೂರಿ ಮತ್ತು ರೂಪ ಅವರನ್ನು ವರ್ಗಾವಣೆ ಮಾಡಿದ್ದು ಯಾವುದೇ ಹುದ್ದೆಯನ್ನು ತೋರಿಸಿಲ್ಲ. ಡಿ. ರೂಪ ಅವರ ಪತಿ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಅವರನ್ನು ಆಡಳಿತ ಸುಧಾರಣೆ ಮತ್ತು ಸಿಬ್ಬಂದಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಅಧಿಕಾರಿಗಳ ಬೀದಿ ಜಗಳದಿಂದ ತೀವ್ರ ಮುಜುಗರಕ್ಕೆ ಒಳಗಾದ ರಾಜ್ಯ ಸರ್ಕಾರ, ಸೇವಾ ನಿಯಮ ಉಲ್ಲಂಘಿಸಿರುವುದಕ್ಕೆ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿದೆ. ಅಲ್ಲದೇ ಇಬ್ಬರಿಗೂ ನೋಟಿಸ್ ಜಾರಿ ಮಾಡಿದೆ.
ಅಧಿಕಾರಿಗಳಿಬ್ಬರ ಮುಸುಕಿನ ಗುದ್ದಾಟ ಕಳೆದ ಕೆಲವು ದಿನಗಳಿಂದ ನಡೆಯುತ್ತಲೇ ಇದ್ದಿದ್ದು ಸುಳ್ಳೇನಲ್ಲ. ಆದರೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕಾರ್ಯವಾಗಿದ್ದು, ಶಾಸಕ ಸಾರಾ ಮಹೇಶ್ ಅವರೊಂದಿಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಅವರ ಸಂಧಾನ ಪ್ರಹಸನ. ಕೋವಿಡ್ ಸಮಯದಲ್ಲಿ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದರು. ಈ ವೇಳೆ ಜನರು ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ ಜನರು ಸಾಯುತ್ತಿದ್ದರೂ ಕೂಡ ಜಿಲ್ಲಾಧಿಕಾರಿ ರೋಹಿಣಿ ತಮ್ಮ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದರು. ಈ ವಿಚಾರ ವಿವಾದಕ್ಕೆ ಕಾರಣವಾಗಿತ್ತಲ್ಲದೆ. ಸಂಸದ ಪ್ರತಾಪ್‌ಸಿಂಹ, ಸಾರಾ ಮಹೇಶ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಚಾಮರಾಜನಗರ ಆಕ್ಸಿಜನ್ ದುರಂತದ ಸೂತ್ರಧಾರಿ ಸಿಂಧೂರಿ ಎಂದು ಜರೆದಿದ್ದರು.
ಮೊದಲು ಮೂಕಪ್ರೇಕ್ಷಕನಂತಿದ್ದ ಸರ್ಕಾರ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅಕ್ರಮಗಳ ಕುರಿತು, ವೈಯಕ್ತಿಕ ಸಂಬಂಧ, ಆಕ್ಷೇಪಾರ್ಹ ವಾಟ್ಸಪ್ ಮೆಸೇಜ್‌ಗಳ ಕುರಿತು ಐಪಿಎಸ್ ರೂಪ ಸರಣಿಯಂತೆ ಜಾಲತಾಣಗಳಲ್ಲಿ ಪೋಸ್ಟ್ ಪ್ರಕಟಿಸಿದ್ದರೂ, ಅದಕ್ಕೆ ರೋಹಿಣಿ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿದರೂ ಕೂಡ ಸರ್ಕಾರ, ಜನಪ್ರತಿನಿಧಿಗಳು ತಮಗೇನು ಸಂಬಂಧವೇ ಇಲ್ಲದ ವಿಷಯ ಎಂಬ ವರ್ತನೆ ತೋರಿದ್ದು ಸತ್ಯ.
ಸಿಎಂ ಸೇರಿದಂತೆ ಗೃಹಸಚಿವ, ಧಾರ್ಮಿಕ ದತ್ತಿ ಇಲಾಖೆ ಸಚಿವರು ಈ ಬಗ್ಗೆ ಪ್ರತಿಕ್ರಿಯೆ, ಖಡಕ್ ಕ್ರಮಕ್ಕೆ ಮುಂದಾಗದಿರುವುದು ಆಡಳಿತ ಯಂತ್ರ ಕುಸಿದಿರುವುದಕ್ಕೆ ಸಾಕ್ಷಿಯಾಗಿತ್ತು. ನಂತರ ಈ ವಿಷಯ ಮುಂಜಾನೆಯಿಂದ ಮುಸ್ಸಂಜೆವರೆಗೆ ಜನರ, ಮಾಧ್ಯಮಗಳ ಚರ್ಚೆಯ ವಿಷಯವಾದ ಬಳಿಕವಷ್ಟೇ ಕ್ರಮ ಕೈಗೊಳ್ಳಲಾಯಿತು.
ವಲಸೆ ಶಾಸಕರ ಸರ್ಕಾರದಿಂದ ಮತ್ತೇನು ನಿರೀಕ್ಷೆ; : ಈ ಘಟನೆಯಿಂದ ಒಂದು ವಿಷಯವಂತು ಸ್ಪಷ್ಟವಾಗಿದೆ. ಸಚಿವರು ಅಧಿಕಾರಿಗಳ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಅವರ ದೃಷ್ಟಿಯೆಲ್ಲ ಈಗ ಚುನಾವಣೆ ಕ್ಯಾಂಪೇನ್, ತನ್ನ ಕ್ಷೇತ್ರ ಭದ್ರಪಡಿಸುವ ಮೇಲಿದೆಯೇ ಹೊರತು ಆಡಳಿತ, ಅಧಿಕಾರಿಗಳ ಮೇಲಲ್ಲ. ವಲಸೆ ಶಾಸಕರಿಂದ ರಚನೆಗೊಂಡ ಸರ್ಕಾರದ ಮೇಲೆ ಮೊದಲ ದಿನದಿಂದಲೂ ಈ ಆರೋಪ ಇತ್ತು. ಇತ್ತೀಚೆಗೆ ಅದು ಪದೇ ಪದೇ ಸಾಬೀತಾಗುತ್ತಿದೆ.