ಮಂಗಳೂರು: ಬಿಸಿಲು ಏರುತ್ತಿರುವಂತೆ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಮತ್ತೆ ಎದುರಾಗುವ ಆತಂಕ ನಿರ್ಮಾಣವಾಗಿದೆ. ಜತೆಗೆ, ಉಳ್ಳಾಲ, ಮೂಡುಬಿದಿರೆ, ಮೂಲ್ಕಿ ವ್ಯಾಪ್ತಿಯಲ್ಲಿಯೂ ನೀರಿನ ಕೊರತೆ ಕಾಡಲಾರಂಭಿಸಿದೆ.
ಬಿಸಿಲಿನ ತೀವ್ರತೆ ಎರ್ರಾಬಿರ್ರಿ ಏರಿಕೆಯಾಗಿ ಮಂಗಳೂರಿನ ತಾಪಮಾನ ದಾಖಲೆ ಸೃಷ್ಟಿಸುತ್ತಿದ್ದರೆ, ಇತ್ತ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ದಿನದಿಂದ ದಿನಕ್ಕೆ ನೀರಿನಮಟ್ಟ ಕುಸಿಯುತ್ತಿದೆ. ಮೂಲಗಳ ಪ್ರಕಾರ ಎಪ್ರಿಲ್ ನಲ್ಲಿ ಮಳೆಯಾಗದೇ ಇದ್ದಲ್ಲಿ 2019 ರ “ನೀರ ಬರ” ಮತ್ತೆ ಮಂಗಳೂರನ್ನು ಕಾಡಲಿದೆ.
ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಒದಗಿಸುವ ವೆಂಟೆಡ್ ಡ್ಯಾಂ ನ ನೀರಿನಮಟ್ಟ 5.85 ಮೀ.ಇಳಿದಿದ್ದು, ಇದರ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಲೂ ಮಹಾನಗರ ಪಾಲಿಕೆ ಸರ್ಕಸ್ ನಡೆಸುತ್ತಿದೆ.
ಒಂದೆಡೆ ಕುಡಿಯುವ ನೀರಿಗೆ ಮೊದಲ ಆದ್ಯತೆಯನ್ನುನೀಡಿರುವ ಮನಪಾ, ಕೈಗಾರಿಕಾ ಉದ್ದೇಶಗಳಿಗೆ ನೀರ ಬಳಸುವುದಕ್ಕೆ ಬ್ರೇಕ್ ಹಾಕಿದೆ. 5.85 ಮೀ.ಗೆ ಇಳಿಕೆಯಾಗಿರುವ ನೀರ ಮಟ್ಟವನ್ನು ಕಾಯ್ದುಕೊಳ್ಳಲು, ಶಂಭೂರಿನ ಎಎಂಆರ್ ಡ್ಯಾಂನಿಂದ ನೀರು ಪಡೆಯಲು ಪಾಲಿಕೆ ನಿರ್ಧರಿಸಿದೆ. ಅದರಂತೆ ಈಗಾಗಲೇ ಎಎಂಆರ್‌ನಿಂದ ತುಂಬೆ ಡ್ಯಾಂಗೆ ನೀರು ಹರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ನೀರು ಪೂರೈಕೆಗೆ ಸಮಸ್ಯೆಯಾಗದಂತೆ ಪಾಲಿಕೆ ಕ್ರಮಕೈಗೊಂಡಿದೆ.
ಎಚ್ಚರಿಕೆಯ ಬಳಕೆ ಅಗತ್ಯ: ನೀರು ಕೊರತೆ ಕಾಣುತ್ತಿರುವ ಈ ದಿನಗಳಲ್ಲಿ ಮಿತ ಬಳಕೆ ಅಗತ್ಯ. ಕಾರು ತೊಳೆಯುವ ಮೊದಲಾದ ಪ್ರವೃತ್ತಿಗಳನ್ನು ನಿಲ್ಲಿಸಬೇಕಿದೆ. ಜನರೇ ಎಚ್ಚರಿಕೆ ವಹಿಸಿದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಪ್ಪಿಸುವ ಸಾಧ್ಯತೆ ಇದೆ. ಅಲ್ಲದೆ ಪೋಲು ತಪ್ಪಿಸುವ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳ ಕ್ರಮವಹಿಸಬೇಕಿದೆ.