ಮಿಸ್ಟರ್ ಇಂಡಿಯಾ ಗುರಿ: ಮಡಿಕೇರಿಯ ಗಣೇಶ್ ಪೂಜಾರಿಗೆ ಬೇಕು ಆರ್ಥಿಕ ನೆರವು

ಮಿಸ್ಟರ್ ಇಂಡಿಯಾ ಗುರಿ: ಮಡಿಕೇರಿಯ ಗಣೇಶ್ ಪೂಜಾರಿಗೆ ಬೇಕು ಆರ್ಥಿಕ ನೆರವು

CI   ¦    Mar 13, 2019 05:54:59 PM (IST)
ಮಿಸ್ಟರ್ ಇಂಡಿಯಾ ಗುರಿ: ಮಡಿಕೇರಿಯ ಗಣೇಶ್ ಪೂಜಾರಿಗೆ ಬೇಕು ಆರ್ಥಿಕ ನೆರವು

ಮಡಿಕೇರಿ: ಮಡಿಕೇರಿ ನಗರದ ಹೊಟೇಲ್‍ವೊಂದರಲ್ಲಿ ಅಡುಗೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಯುವಕನೊಬ್ಬ ಈಗ ಮಿಸ್ಟರ್ ಇಂಡಿಯಾ ಆಗುವ ಕನಸು ಕಾಣುತ್ತಿದ್ದಾನೆ. ಸತತ ಪರಿಶ್ರಮ ಮತ್ತು ಛಲದಿಂದ ಮಿಸ್ಟರ್ ಮಂಗಳೂರು ಆಗಿ ಗಮನ ಸೆಳೆದಿದ್ದ ಈ ಯುವಕನಿಗೆ ಮಿಸ್ಟರ್ ಇಂಡಿಯಾದ ಗುರಿ ಮುಟ್ಟಲು ಆರ್ಥಿಕ ಹಿನ್ನಡೆ ಅಡ್ಡಿಯಾಗಿದೆ.

ಸುರಭಿ ರೆಸ್ಟೋರೆಂಟ್‍ನಲ್ಲಿ ಸಿಬ್ಬಂದಿಯಾಗಿರುವ ಕುಂದಾಪುರ ಮೂಲದ ಗಣೇಶ್ ಕೆ.ಪೂಜಾರಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಮಿಸ್ಟರ್ ಮಂಗಳೂರು ದೇಹದಾರ್ಢ್ಯ ಸ್ಪರ್ಧೆಯಲ್ಲಿ ನ್ಯಾಚುರಲ್ ಬಾಡಿ ಬಿಲ್ಡರ್ ವಿಭಾಗದಲ್ಲಿ “ಮಿಸ್ಟರ್ ಮಂಗಳೂರು” ಪ್ರಶಸ್ತಿಯ ಗರಿಯನ್ನು ತಮ್ಮದಾಗಿಸಿಕೊಂಡಿದ್ದರು. ಆ ಮೂಲಕ ನವೆಂಬರ್‍ ನಲ್ಲಿ ಬೆಂಗಳೂರಿನಲ್ಲಿ ನಡೆಯುವ “ಮಿಸ್ಟರ್ ಇಂಡಿಯಾ” ದೇಹದಾರ್ಢ್ಯ ಸ್ಪರ್ಧೆಯ “ನ್ಯಾಚುರಲ್ ಬಾಡಿ ಬಿಲ್ಡರ್ -2019” ರ ವಿಭಾಗದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದುಕೊಂಡಿದ್ದಾರೆ.

ಈ ಹಿಂದೆಯೂ ದೇಹದಾರ್ಢ್ಯ ಸ್ಪರ್ಧೆಯಲ್ಲಿ “ಮಿಸ್ಟರ್ ದಕ್ಷಿಣ ಕನ್ನಡ ಪ್ರಶಸ್ತಿಗೆ ಪಾತ್ರರಾಗಿದ್ದ 24 ವರ್ಷದ ಗಣೇಶ್ ಪೂಜಾರಿ ಈವರೆಗೆ 2 ಚಿನ್ನ ಮತ್ತು 1 ಬೆಳ್ಳಿ ಪದಕ ಗೆದ್ದಿದ್ದಾರೆ.

ಬಾಲ್ಯದಿಂದಲೇ ದೇಹದಾರ್ಢ್ಯದ ಬಗ್ಗೆ ಒಲವು ಹೊಂದಿದ್ದ ಗಣೇಶ್ ಮನೆ ಪಕ್ಕದಲ್ಲಿದ್ದ ಮಂಜು ಎಂಬುವವರ ದೈಹಿಕ ಕಸರತ್ತು ಗಮನಿಸಿ ಅವರಲ್ಲಿ ಪ್ರಾರಂಭಿಕ ತರಬೇತಿ ಪಡೆದುಕೊಂಡಿದ್ದರು. ಮಿಸ್ಟರ್ ಯೂನಿವರ್ಸ್ ಪ್ರಶಸ್ತಿ ಪಡೆದಿದ್ದ ತನ್ನ ಗೆಳೆಯ ನಿಶಾನ್ ಯಾವುದೇ ಸಂಭಾವನೆ ಪಡೆಯದೆ ನನಗೆ ಎಲ್ಲಾ ರೀತಿಯ ಮಾರ್ಗದರ್ಶನ ನೀಡಿದ್ದು, ಇದೀಗ 6 ವರ್ಷಗಳಿಂದ ಮಡಿಕೇರಿಯಲ್ಲಿ ಹೆಸರಾಂತ ದೈಹಿಕ ತರಬೇತುದಾರ ಪ್ರದೀಪ್ ಅವರಲ್ಲಿ ತರಬೇತಿ ಪಡೆಯುತ್ತಿರುವುದಾಗಿ ಗಣೇಶ್ ಹರ್ಷ ವ್ಯಕ್ತಪಡಿಸಿದ್ದಾರೆ. ಅಗತ್ಯವಿರುವ ಎಲ್ಲಾ ತರಬೇತಿಯನ್ನು ನೀಡಿ ದೇಹವನ್ನು ಮತ್ತಷ್ಟು ಗಟ್ಟಿಮುಟ್ಟಾಗುವಂತೆ ಮಾಡಿ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಲು ಪ್ರೇರಣೆ ನೀಡಿದವರು ಪ್ರದೀಪ್ ಎಂದು ಅವರು ಶ್ಲಾಘಿಸಿದ್ದಾರೆ. ಮಿಸ್ಟರ್ ವರ್ಲ್ಡ್ ಖ್ಯಾತಿಯ ರೇಮಂಡ್ ಡಿಸೋಜಾ ಅವರು ಕೂಡ ಗಣೇಶ್ ಪೂಜಾರಿ ದೇಹದಾರ್ಢ್ಯತೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು, ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲು ಸ್ಫೂರ್ತಿ ತುಂಬಿದಂತ್ತಾಗಿದೆ.

ದಿನಕ್ಕೆ 12 ಮೊಟ್ಟೆ, ಮುಕ್ಕಾಲು ಕೆಜಿ ಚಿಕನ್, 1 ಕೆಜಿ ಯಷ್ಟು ಹಣ್ಣು, ಡ್ರೈಫ್ರೂಟ್ಸ್, ಮೊಳಕೆ ಕಾಳುಗಳನ್ನು ಸೇವಿಸುವ ಮೂಲಕ ದೇಹ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಗಣೇಶ್ ಪೂಜಾರಿಗಿದೆ. ಯಾವುದೇ ಔಷಧಿ, ಚುಚ್ಚುಮದ್ದು, ಮಾತ್ರೆಗಳನ್ನು ಅವಲಂಭಿಸದೇ ನೈಸರ್ಗಿಕವಾಗಿ ದೇಹದಾರ್ಢ್ಯತೆಯನ್ನು ಸಾಧಿಸಿದ್ದಾರೆ.

ಏಳನೇ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ತಾಯಿ ಹಾಗೂ ತಮ್ಮನ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಗಣೇಶ್ ಪೂಜಾರಿ ರೆಸ್ಟೋರೆಂಟ್‍ನಲ್ಲಿ ಅಡುಗೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಹದಾರ್ಢ್ಯತೆಯ ಸಾಧನೆಗೆ ಮಡಿಕೇರಿಯ ಸುರಭಿ ರೆಸ್ಟೋರೆಂಟ್‍ನ ಮಾಲೀಕ ಜಯಂತ್ ನೀಡಿರುವ ನೆರವನ್ನು ಅವರು ಸ್ಮರಿಸಿಕೊಳ್ಳುತ್ತಾರೆ. ನನ್ನನ್ನು ಬೆಂಬಲಿಸಿ ಧೈರ್ಯ ತುಂಬುತ್ತಿರುವ ಜಯಂತ್ ಅವರ ಮಾರ್ಗದರ್ಶನದಿಂದಾಗಿಯೇ ಹೋಟೇಲ್‍ನಲ್ಲಿಯೂ ಕೆಲಸ ಮಾಡುತ್ತಾ ದೇಹದಾರ್ಢ್ಯತೆಯ ತರಬೇತಿಯನ್ನು ಪಡೆಯಲು ಸಾಧ್ಯವಾಯಿತು ಎಂದು ಗಣೇಶ್ ತೃಪ್ತಿ ವ್ಯಕ್ತಪಡಿಸುತ್ತಾರೆ.

ಆರ್ಥಿಕ ನೆರವು ಬೇಕಾಗಿದೆ
ಪ್ರತಿದಿನದ ಆಹಾರ ಕ್ರಮಕ್ಕಾಗಿಯೇ 300 ರಿಂದ 500 ರೂ.ಗಳ ವರೆಗೆ ಖರ್ಚಾಗುತ್ತಿದ್ದು, ತರಬೇತಿ ಮತ್ತು ದೇಹದಾರ್ಢ್ಯತೆಯ ಸ್ಪರ್ಧೆಗಳಿಗೆ ತೆರಳಲು ಕೂಡ ಹಣದ ಅಗತ್ಯವಿದೆ. ಇದೀಗ “ಮಿಸ್ಟರ್ ಇಂಡಿಯಾ” ದೇಹದಾರ್ಢ್ಯ ಸ್ಪರ್ಧೆಯ “ನ್ಯಾಚುರಲ್ ಬಾಡಿ ಬಿಲ್ಡರ್ -2019” ರ ವಿಭಾಗದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿರುವ ಗಣೇಶ್ ಪೂಜಾರಿ ಆರ್ಥಿಕ ನೆರವು ಮತ್ತು ಪ್ರಾಯೋಜಕರ ನಿರೀಕ್ಷೆಯಲ್ಲಿದ್ದಾರೆ.
ಗಣೇಶ್ ಪೂಜಾರಿ ಅವರ ಮೊಬೈಲ್ ಸಂ: 80502 46162 (ಬ್ಯಾಂಕ್ ಖಾತೆ ಸಂಖ್ಯೆ ಗಣೇಶ್.ಕೆ 481250 010129 4701 ಕರ್ನಾಟಕ ಬ್ಯಾಂಕ್, ಮಡಿಕೇರಿ ಶಾಖೆ. ಐಎಫ್‍ಎಸ್‍ಸಿ ಕೋಡ್ karboooo481.