ಕೊಹ್ಲಿ ದಾಖಲೆ ಮುರಿದ ಸ್ಟೀವನ್ ಸ್ಮಿತ್

ಕೊಹ್ಲಿ ದಾಖಲೆ ಮುರಿದ ಸ್ಟೀವನ್ ಸ್ಮಿತ್

Pavan Kumar   ¦    Jan 08, 2021 01:00:19 PM (IST)
ಕೊಹ್ಲಿ ದಾಖಲೆ ಮುರಿದ ಸ್ಟೀವನ್ ಸ್ಮಿತ್

ಸಿಡ್ನಿ: ಟೆಸ್ಟ್ ಕ್ರಿಕೆಟ್ 27ನೇ ಶತಕ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಅವರು ಭಾರತ ಕ್ರಿಕೆಟ್ ತಂಡದ ದಿಗ್ಗಜ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಸರಿಗಟ್ಟಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಸ್ಟೀವನ್ ಸ್ಮಿತ್ ಈ ಶತಕ ದಾಖಲಿಸಿದ್ದು, ಸ್ಮಿತ್ ಒಟ್ಟು 226 ಎಸೆತಗಳಲ್ಲಿ 16 ಬೌಂಡರಿಗಳ ನೆರವಿನಿಂದ 131 ರನ್ ಗಳಿಸಿದರು. ಈ ಮೂಲಕ ಆಸೀಸ್ ತಂಡವನ್ನು 338 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.

ಜೊತೆಗೆ ಆಸ್ಟ್ರೇಲಿಯಾದ ದಿಗ್ಗಜ ಸರ್ ಡಾನ್ ಬ್ರಾಡ್ಮನ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 27 ಶತಕಗಳನ್ನು ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಕೂಡಾ ಸ್ಟೀವನ್ ಸ್ಮಿತ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಸಚಿನ್ ತೆಂಡೂಲ್ಕರ್ ಅವರನ್ನ ಕೂಡಾ ಹಿಂದಿಕ್ಕಿದ್ದಾರೆ.

ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮಾಜಿ ದಿಗ್ಗಜರಾದ ಗ್ಯಾರಿ ಸೋಬರ್ಸ್, ವಿವ್ ರಿಚರ್ಡ್ಸ್ ಮತ್ತು ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದು ಭಾರತ ವಿರುದ್ಧ ಸ್ಮಿತ್ ಅವರ ಬ್ಯಾಟ್‌ನಿಂದ ಸಿಡಿದ ಎಂಟನೇ ಶತಕವಾಗಿದೆ.

ಈ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್ ರನ್ ಬೇಟೆಯಲ್ಲೂ ವಿರಾಟ್ ಕೊಹ್ಲಿ ಅವರನ್ನು ಸ್ಟೀವನ್ ಸ್ಮಿತ್ ಹಿಂದಿಕ್ಕಿದ್ದಾರೆ.

87 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 7318 ರನ್ ಗಳಿಸಿದ್ದರು. ಸ್ಮಿತ್ 75 ಟೆಸ್ಟ್‌ಗಳಲ್ಲೇ ಸಾಧಿಸಿದ್ದಾರೆ.