ರಿಯೋ ಡಿ ಜನೈರೋ: ಬ್ರೆಜಿಲ್ ನಲ್ಲಿ ರಿಯೋ ಒಲಿಂಪಿಕ್ಸ್ ಜ್ಯೋತಿ ಬೆಳಗುವುದರ ಮೂಲಕ ಅದ್ದೂರಿಯಾಗಿ, ವರ್ಣರಂಜಿತವಾಗಿ ಆರಂಭಗೊಂಡಿದೆ.
ಭಾರತೀಯ ಕಾಲಮಾನ ಬೆಳಗ್ಗೆ 4.30ಕ್ಕೆ ಬ್ರೆಜಿಲ್‌ನ ಮರಕಾನ ಕ್ರೀಡಾಂಗಣದಲ್ಲಿ ಸಿಡಿಮದ್ದುಗಳ ವರ್ಣರಂಜಿತ ಚಿತ್ತಾರದೊಂದಿಗೆ ರಿಯೋ ಒಲಿಂಪಿಕ್ಸ್ ಆರಂಭವಾಗಿದೆ. ಆರಂಭೋತ್ಸವದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಶೂಟರ್ ಅಭಿನವ್ ಬಿಂದ್ರಾ ಹಿಡಿದು ಮುನ್ನಡೆದರು. ಬ್ರೆಜಿಲ್ ರಾಷ್ಟ್ರಗೀತೆಯೊಂದಿಗೆ ಮನೋರಂಜನಾ ಕಾರ್ಯಕ್ರಮಗಳು ಆರಂಭಗೊಂಡವು. ಒಲಿಂಪಿಕ್ಸ್ ಜ್ಯೋತಿ ಬೆಳಗುವ ಮೂಲಕ17 ದಿನಗಳ ಕ್ರೀಡಾಸ್ಪರ್ಧೆಗೆ ಚಾಲನೆ ಸಿಕ್ಕಿದೆ.
ರಿಯೋ ಒಲಿಂಪಿಕ್ಸ್‌ನಲ್ಲಿ 28 ಕ್ರೀಡೆಗಳಿದ್ದು, ಒಟ್ಟು 37 ಕ್ರೀಡಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ಈ ಭಾರಿ 206 ದೇಶಗಳ 11,239 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದಾರೆ. ಕ್ಯಾರಿಓಕ ಗಾನಸುಧೆಯೊಂದಿಗೆ ಸಾವಿರಾರು ಕಲಾವಿದರು ಮರಕಾನ ಕ್ರೀಡಾಂಗಣದಲ್ಲಿ ಮಂತ್ರಮುಗ್ಧ ಕ್ಷಣಗಳನ್ನು ದಾಖಲಿಸಿದರು. ಅಮೆಜಾನ್ ಮಳೆಕಾಡುಗಳು ಬ್ರೆಜಿಲ್ ಜನತೆಯ ಜೀವನ ಶೈಲಿಯ ಭಾಗವಾಗಿರುವ ಬಗ್ಗೆ ಅದ್ಭುತ ರೂಪಕವನ್ನು ಸಮಾರಂಭದಲ್ಲಿ ಪ್ರದರ್ಶಿಸಲಾಯಿತು.