ಮಡಿಕೇರಿ: ಕೊಡಗು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಸುಂಟಿಕೊಪ್ಪದ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಕೋಟಿ ಚೆನ್ನಯ್ಯ ಬಿಲ್ಲವ ಕ್ರೀಡಾಕೂಟ ಈ ಬಾರಿ ಡಿ.10 ರಿಂದ 12ರವರೆಗೆ ಸುಂಟಿಕೊಪ್ಪದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಲ್ಲವ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಆನಂದ ರಘು, ಕ್ರಿಡಾಕೂಟದ ಕುರಿತು ಮಾಹಿತಿ ನೀಡಿದರು. ಇಷ್ಟರವರೆಗೆ ಬಿಲ್ಲವ ಸಮಾಜದ ಮೂಲಕ ಆಯಾ ತಾಲ್ಲೂಕುಗಳಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಸಂಘ ರಚನೆಯಾದ ಬಳಿಕ ಜಿಲ್ಲಾ ಮಟ್ಟದ ಕ್ರೀಡಾಕೂಟ ಸುಂಟಿಕೊಪ್ಪದಲ್ಲಿ ನಡೆಯುತ್ತಿದೆ ಎಂದರು.
ಡಿ.10 ರಂದು ಸುಂಟಿಕೊಪ್ಪದ ಕೋದಂಡ ರಾಮ ದೇವಾಲಯದಲ್ಲಿ ಪೂಜಾವಿಧಿ ವಿಧಾನಗಳು ನಡೆದು ನಂತರ ಮಾದಾಪುರದ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಕೆಳಗಿನ ಮೈದಾನದಲ್ಲಿ 5ನೇ ವರ್ಷದ ಶ್ರೀ ನಾರಾಯಣ ಗುರುಗಳ ಪೂಜಾ ಕಾರ್ಯಕ್ರಮ ನಡೆಯಲಿದೆ. ಇದೇ ಮೈದಾನದಲ್ಲಿ ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಧ್ಯಕ್ಷರಾದ ಬಿ.ವೈ. ಆನಂದ ರಘು ಚಾಲನೆ ನೀಡಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಮಾರು 40 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ತಿಳಿಸಿದರು.
ಡಿ.11 ರಂದು ಸುಂಟಿಕೊಪ್ಪದ ಜಿಎಂಪಿ ಶಾಲಾ ಮೈದಾನದಲ್ಲಿ ವಾಲಿಬಾಲ್, ಥ್ರೋ ಬಾಲ್, ಭಾರದ ಗುಂಡು ಎಸೆತ, ಹಗ್ಗ ಜಗಾಟ, ವೇಗದ ನಡಿಗೆ ಹಾಗೂ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆ ನಡೆಯಲಿದೆ. ಡಿ.12 ರಂದು ವಾಲಿಬಾಲ್ ಹಾಗೂ ಥ್ರೋಬಾಲ್ ಅಂತಿಮ ಪಂದ್ಯಾಟ ನಡೆಯಲಿದೆ. ಇದರೊಂದಿಗೆ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಮನೋರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಮಾರೋಪ ಸಮಾರಂಭ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಇದರ ಪ್ರಯುಕ್ತ ಬೆಳಗ್ಗೆ 10 ಗಂಟೆಗೆ ಸುಂಟಿಕೊಪ್ಪದ ಮುಖ್ಯ ರಸ್ತೆಯಲ್ಲಿ ಶ್ರೀ ನಾರಾಯಣ ಗುರು ಮತ್ತು ಕೋಟಿ ಚೆನ್ನಯ್ಯ ಅವರ ಭಾವ ಚಿತ್ರವಿರುವ ಅಲಂಕೃತ ಮಂಟಪದ ಭವ್ಯ ಮೆರವಣಿಗೆ ಸಾಸ್ಕೃತಿಕ ಕಲಾ ತಂಡಗಳೊಂದಿಗೆ ನಡೆಯಲಿದೆಯೆಮದು ಆನಂದ ರಘು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆಂದು ಅವರು ಹೇಳಿದರು. ಕ್ರಿಕೆಟ್ ಪಂದ್ಯಾವಳಿಗೆ 750 ರೂ, ಮಹಿಳಾ ತಂಡಕ್ಕೆ 500 ರೂ, ವಾಲಿಬಾಲ್ಗೆ 750 ರೂ, ಥ್ರೋಬಾಲ್ 300 ರೂ. ಹಾಗೂ ಹಗ್ಗಜಗ್ಗಾಟ ತಂಡಗಳಿಗೆ 750 ರೂ. ಮೈದಾನ ಶುಲ್ಕವನ್ನು ವಿಧಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಬಿ.ಜಿ. ಗಂಗಾಧರ ಬಂಗೇರ, ಖಜಾಂಚಿ ಡಿ.ಕೆ. ಮೋಹನ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಿ.ಎಂ. ರಾಜಶೇಖರ್, ಪ್ರಮುಖರಾದ ಅರುಣ್ ಕುಮಾರ್ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ರತ್ನಾ ವಿಜಯ ಉಪಸ್ಥಿತರಿದ್ದರು.