News Kannada
Tuesday, November 29 2022

ಕ್ರೀಡೆ

ಡಿ.10 ರಂದು ಕೂಡಿಗೆ ಕ್ರೀಡಾ ಶಾಲಾ ಮೈದಾನದಲ್ಲಿ ಗೇಲ್ ಇಂಡಿಯನ್ ಸ್ಪೀಡ್ ಸ್ಟಾರ್ ಗಳ ಆಯ್ಕೆ - 1 min read

Photo Credit :

ಡಿ.10 ರಂದು ಕೂಡಿಗೆ ಕ್ರೀಡಾ ಶಾಲಾ ಮೈದಾನದಲ್ಲಿ ಗೇಲ್ ಇಂಡಿಯನ್ ಸ್ಪೀಡ್ ಸ್ಟಾರ್ ಗಳ ಆಯ್ಕೆ

ಮಡಿಕೇರಿ: ರಾಷ್ಟ್ರೀಯ ಯುವ ಸಹಕಾರ ಸಂಸ್ಥೆಯು ಭಾರತದ ಪೆಟ್ರೋಲಿಯಂ ಮತ್ತು ಗ್ಯಾಸ್ ಇಲಾಖೆಯ ಪ್ರಯೋಜಕತ್ವದಲ್ಲಿ ನಡೆಸಲ್ಪಡುತ್ತಿರುವ 2016-17ನೇ ಸಾಲಿನ ಗೇಲ್ ಇಂಡಿಯನ್ ಸ್ಪೀಡ್ ಸ್ಟಾರ್ ಗಳ ಆಯ್ಕೆಗಾಗಿ ಕೊಡಗಿನ ಸ್ಪೀಡ್ ಸ್ಟಾರ್ ಗಳ ಆಯ್ಕೆ ಪ್ರಕ್ರಿಯೆಯು ಇದೇ ಡಿ.10 ರಂದು ಕುಶಾಲನಗರ ಸಮೀಪದ ಕೂಡಿಗೆಯ ಕ್ರೀಡಾ ಪ್ರೌಢ ಶಾಲೆಯ ಸಿಂಥೆಟಿಕ್ ಮೈದಾನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಯುವ ಸಹಕಾರ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಧನಂಜಯ್ ಅಗೋಳಿಕಜೆ ಡಿ.10 ರಂದು ಬೆಳಿಗ್ಗೆ 8.30 ರಿಂದ ಸ್ಪೀಡ್ ಸ್ಟಾರ್ ಗಳ ಆಯ್ಕೆ ಪ್ರಕ್ರಿಯೆಯು ನಡೆಯಲಿದ್ದು, ಹೆಚ್ಚಿನ ಕ್ರೀಡಾಪಟುಗಳನ್ನು ನಿರೀಕ್ಷಿಸಲಾಗಿದೆ ಎಂದರು. ಕಳೆದ ವರ್ಷ ಕೇವಲ ದೇಶದ 53 ಜಿಲ್ಲೆಗಳಲ್ಲಿ ಈ ಆಯ್ಕೆ ನಡೆದಿದ್ದು, ಕೊಡಗಿನಲ್ಲಿ ನಡೆದ ಆಯ್ಕೆಯಲ್ಲಿ 773 ಮಂದಿ ಕ್ರೀಡಾಳುಗಳು ಭಾಗವಹಿಸುವುದರೊಂದಿಗೆ ಅತ್ಯಧಿಕ ಸ್ಪರ್ಧಿಗಳು ಭಾಗವಹಿಸಿದ ಜಿಲ್ಲೆ ಎಂಬ ಖ್ಯಾತಿಯನ್ನು ಪಡೆದಿದೆ ಎಂದು ಅವರು ತಿಳಿಸಿದರು. ಇದರಲ್ಲಿ 26 ಮಂದಿ ನಿಗಧಿಪಡಿಸಿದ ಸಮಯದಲ್ಲಿ ಓಡಿ ಪೂನಾದಲ್ಲಿ ನಡೆದ ರಾಜ್ಯಮಟ್ಟದಲ್ಲಿ ಭಾಗವಹಿಸಿ, ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಆಯ್ಕೆಗೆ 4 ಜನ ಸ್ಪರ್ಧಿಗಳು ಭಾಗವಹಿಸಿದ್ದರು. ದೆಹಲಿಯ ಅಂತಿಮ ಆಯ್ಕೆ ಸ್ಪರ್ಧೆಯಲ್ಲಿ ಕೇಂದ್ರ ಸರ್ಕಾರದ ಹಣಕಾಸು ಸಚಿವರಾದ ಅರುಣ್ ಜೆಟ್ಲಿ, ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರಧಾನ್ ರವರು ಉಪಸ್ಥಿತರಿದ್ದು, ಮಾರ್ಗದರ್ಶನ ನೀಡಿದ್ದು, ಆಯ್ಕೆಯಾಗಿರುವ ಸ್ಪೀಡ್ ಸ್ಟಾರ್ ಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

ರಾಷ್ಟ್ರೀಯ ಯುವ ಸಹಕಾರ ಸಂಸ್ಥೆಯು ರಾಷ್ಟ್ರದ ಯುವಕರಲ್ಲಿ ಸಂಘಟನಾತ್ಮಕ ಮನೋಭಾವದೊಂದಿಗೆ ರಾಷ್ಟ್ರದ ಹಲವು ವಿಷಯಗಳಿಗೆ ಹೊಸ ದಿಕ್ಕನ್ನು ಹುಡುಕುವ, ಎಲ್ಲರನ್ನು ಪಾಲ್ಗೊಳಿಸುವ, ಅಸಾಧ್ಯವಾದ ಮಾರ್ಗಗಳನ್ನು ಸಾಧ್ಯಗೊಳಿಸುವ ಹಾಗೂ ಪ್ರೇರಣೆ ನೀಡುವಂತಹ ಕೆಲಸವನ್ನು 1999 ರಿಂದಲೂ ಮಾಡುತ್ತಿದೆ. ಈ ನಿಟ್ಟಿನಲ್ಲಿ ದೇಶದ 450 ಜಿಲ್ಲೆಗಳಲ್ಲಿ ತನ್ನ ವಿವಿಧ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಯುವಕರಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ತರಗತಿಗಳು, ಸಣ್ಣ ಹಣಕಾಸು ಸಂಸ್ಥೆಗಳ ಪ್ರಾರಂಭ, ಕೃಷಿ ಚಟುವಟಿಕೆಗಳ ಆಧುನೀಕರಣಕ್ಕೆ ಸಹಾಯ, ಪ್ರವಾಸೋದ್ಯಮದ ಬೆಳವಣಿಗೆಗೆ ಮಾಹಿತಿಗಳು ಮತ್ತು ಕ್ರೀಡೆಯಲ್ಲಿ ಭಾರತವನ್ನು ವಿಶ್ವದಲ್ಲಿ ಮುಂಚೂಣಿಗೆ ತರುವ ಕಾರ್ಯಗಳನ್ನು ನಡೆಸುತ್ತಿದೆ ಎಂದು ಧನಂಜಯ್ ಮಾಹಿತಿ ನೀಡಿದರು.

2020 ರ ಜಪಾನ್ನಲ್ಲಿ ನಡೆಯುವ ಟೋಕಿಯೊ ಒಲಂಪಿಕ್ಸ್ ಗೆ ಮತ್ತು 2024 ರ ಹೊತ್ತಿನಲ್ಲಿ ನಡೆಯುವ ಒಲಂಪಿಕ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಚಿನ್ನದ ಪದಕಗಳನ್ನು ಗಳಿಸುವ ದೃಷ್ಠಿಯಿಂದ ಕಳೆದ 2015 ರಿಂದ ಭಾರತದ ಮೂಲೆ ಮೂಲೆಗಳಿಂದ ಯುವ ಉತ್ಸಾಹಿ ಪ್ರತಿಭಾನ್ವಿತ ಓಟಗಾರರ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಒಟ್ಟು ಇಡೀ ದೇಶದಲ್ಲಿ 26 ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿರುವುದು ವಿಶೇಷವಾಗಿದೆ. ಈ ವರ್ಷ ಭಾರತದ 100 ಕೇಂದ್ರಗಳಲ್ಲಿ 27 ರಾಜ್ಯ 9 ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿ ಪ್ರತಿಭಾನ್ವಿತರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದರು.
11 ರಿಂದ 14 ಮತ್ತು 15 ರಿಂದ 17 ವಯಸ್ಸಿನ ಹುಡುಗ ಹುಡುಗಿಯರಿಗೆ 100 ಮೀ, 200ಮೀ ಮತ್ತು 400 ಮೀ ಗಳ ಓಟದ ಸ್ಪರ್ಧೆಯನ್ನು ಏರ್ಪಡಿಸಿ ನಿಗಧಿತ ಸಮಯದಲ್ಲಿ ಓಡುವ ಸ್ಪರ್ಧಾಳುಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಆಯ್ಕೆಯು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಇದಕ್ಕೆ ಮೆಡಲ್ ಹಂಟರ್  ಎಂಬ ಸಂಸ್ಥೆಯು ತಾಂತ್ರಿಕ ಸಹಾಯವನ್ನು ನೀಡುತ್ತಿದೆ. ಕರ್ನಾಟಕ ರಾಜ್ಯದ 5 ಕೇಂದ್ರಗಳಲ್ಲಿ ಈ ಆಯ್ಕೆ ನಡೆಯುತ್ತಿದ್ದು, ಕೊಡಗು ಮಂಗಳೂರು, ಬೆಂಗಳೂರ, ಬೆಳಗಾವಿ ಮತ್ತು ಗುಲ್ಬರ್ಗ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದ್ದು, ಕೊಡಗು ಜಿಲ್ಲೆಯೊಂದಿಗೆ ಮೈಸೂರು ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಲು ಅವಕಾಶವಿದೆ ಎಂದು ಧನಂಜಯ ತಿಳಿಸಿದರು.

See also  ಮೂರನೇ ಟೆಸ್ಟ್: ಮಯಾಂಕ್ ಅಗರ್ವಾಲ್ ಗೆ ಅವಕಾಶ

ಜಿಲ್ಲೆಯ ಎಲ್ಲಾ ಪ್ರೌಢಶಾಲೆ ಮತ್ತು ಪಿ.ಯು.ಸಿ. ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ 11 ರಿಂದ 17 ವಯಸ್ಸಿನೊಳಗಿನ ಮಕ್ಕಳು ಆಯಾ ತಾಲ್ಲೂಕಿನ ಬಿ.ಓ. ಕಛೇರಿಗಳಲ್ಲಿ ಸಿಗುವ ಅರ್ಜಿಗಳನ್ನು ಪಡೆದುಕೊಂಡು ಡಿ. 7ರ ಒಳಗಾಗಿ ಮತ್ತೆ ಬಿ.ಓ. ಕಛೇರಿಗಳಿಗೆ ಹಿಂದುರುಗಿಸಬೇಕು ಮತ್ತು ಜನನ ಪ್ರಮಾಣ ಪತ್ರಗಳನ್ನು ಶಾಲೆಯಲ್ಲಿ ಪರಿಶೀಲಿಸಿ ಕಳುಹಿಸಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ.  ಆಯ್ಕೆಯ ಮುಂದಿನ ಹಂತಗಳಲ್ಲಿ, ವೈದ್ಯಕೀಯ ವಿಭಾಗಗಳಲ್ಲಿ ವಯಸ್ಸಿನ ಪರೀಕ್ಷೆಗಳನ್ನು ನಡೆಸಲಾಗುವುದು. ಜಿಲ್ಲೆಯ ಎಲ್ಲಾ ಶಾಲೆಗಳ ದೈಹಿಕ ಶಿಕ್ಷಕ ಶಿಕ್ಷಕಿಯರು, ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರುಗಳು, ಕ್ರೀಡೆಗೆ ಪ್ರೋತ್ಸಾಹ ನೀಡುವವರು, ಸಮಾಜ ಸೇವಕರು ಈ ಆಯ್ಕೆ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಭಾನ್ವಿತ ಓಟಗಾರರನ್ನು ಡಿ.10 ರಂದು ಕಳುಹಿಸಿಕೊಡುವಂತೆ ಧನಂಜಯ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆಗಳು: ಧನಂಜಯ್-ಮೊ: 9449731238, ನವನೀತ್ ಪೊನ್ನೆಟ್ಟಿ- ಮೊ: 9900732192, ಪವನ್ ಮೊ: 9535348705.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಂ.ಜೆ.ಲೋಕೇಶ್, ರಾಘವೇಂದ್ರ, ನವನೀತ್ ಪೊನ್ನೆಟ್ಟಿ ಹಾಗೂ ಪವನ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು