ಮಡಿಕೇರಿ: ಮಡಿಕೇರಿ ಸಂತ ಮೈಕಲರ ದೇವಾಲಯ ಮತ್ತು ಧರ್ಮ ಕೇಂದ್ರ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಡಿ. 10 ಮತ್ತು 11ರಂದು 3ನೇ ವರ್ಷದ ಕ್ರಿಸ್ಮಸ್ ಕಪ್-2016 ಫುಟ್ಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಧರ್ಮಗುರು ಜಾನ್ ಆಲ್ಫ್ರೆಡ್ ಮೆಂಡೊನ್ಸಾ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಕಳೆದೆರಡು ವರ್ಷಗಳಿಂದ ಪಂದ್ಯಾಟವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು ಈ ಬಾರಿ ಕೂಡ ಜಿಲ್ಲಾ ಮಟ್ಟದ ರೋಮನ್ ಕೆಥೋಲಿಕ್ ಧರ್ಮ ಕೇಂದ್ರಗಳ ನಡುವೆ 5 + 2 ಆಟಗಾರರ ಫುಟ್ಬಾಲ್ ಪಂದ್ಯಾಟವನ್ನು ಯಶಸ್ವಿಯಾಗಿ ನಡೆಸಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ ಒಟ್ಟು 19 ಕೆಥೋಲಿಕ್ ಧರ್ಮ ಕೇಂದ್ರಗಳ ತಂಡಗಳಿಂದ ಡಿ.5ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದ ಅವರು, ಡಿ.7 ರಂದು ಕಾರ್ಯಕಾರಿ ಸಮಿತಿಯ ಮುಂದೆ ಟೈಸ್ನ್ನು ಬಿಡುಗಡೆ ಮಾಡಲಾಗುವುದು ಎಂದರು.
ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ನಗದನ್ನು ನೀಡಲಾಗುವುದು. ಈ ಪಂದ್ಯಾಟ ರೋಮನ್ ಕೆಥೋಲಿಕ್ ಕ್ರೈಸ್ತ ಬಾಂಧವರಿಗೆ ಮಾತ್ರ ಆಯೋಜಿಸಲಾಗಿದ್ದು ಇತರ ಧರ್ಮ ಕೇಂದ್ರದ ಆಟಗಾರರನ್ನು ಸೇರಿಸಿಕೊಳ್ಳುವಂತಿಲ್ಲ. ಪ್ರತಿ ತಂಡಕ್ಕೆ 1000 ರೂ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪಂದ್ಯಾಟವು 15+15 ಹಾಗೂ 20 + 20 ನಿಮಿಷಗಳಿಗೆ ಸೀಮಿತವಾಗಿರುತ್ತದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಕ್ರಿಸ್ಟೋಫರ್, ಖಜಾಂಚಿ ಅರುಣ್ ಕುಮಾರ್, ಕಾರ್ಯದರ್ಶಿ ಜಸ್ಟಿನ್ ಪಿ.ಜೆ. ಮತ್ತು ಸದಸ್ಯ ಮೈಕಲ್ ಉಪಸ್ಥಿತರಿದ್ದರು.