ಮಡಿಕೇರಿ: ಮುಂದಿನ ಸಾಲಿನ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯುವ 18ನೇ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವ ‘ಅಳಮೇಂಗಡ ಕ್ರಿಕೆಟ್ ಕಪ್’ ಲಾಂಛನವನ್ನು ಬಾಳೆಲೆ ಕೊಡವ ಸಮಾಜದಲ್ಲಿ ಅಳಮೇಂಗಡ ಕುಟುಂಬಸ್ಥರು ಬಿಡುಗಡೆಗೊಳಿಸಿದರು.
ಕುಟುಂಬದ ಹಿರಿಯರು ರಿಮೋಟ್ ಮೂಲಕ ಪರದೆಯಲ್ಲಿ ಲಾಂಛನವನ್ನು ಮೂಡಿಸುವ ಮೂಲಕ ಪಂದ್ಯಾವಳಿಯ ಅಧಿಕೃತ ಲಾಂಛನ ಉದ್ಘಾಟನೆಗೊಂಡಿತು. ಲಾಂಛನ ಬಿಡುಗಡೆ ಸಂದರ್ಭ ಅಳಂಮೇಂಗಡ ಕುಟುಂಬದ ಇತಿಹಾಸ, ಕೈಮಡ, ಹಿರಿಯರನ್ನು ಪರಿಚಯಿಸುವ ಮೂಲಕ ಗಮನ ಸೆಳೆಯಲಾಯಿತು. ಇಲ್ಲಿಯವರೆಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ ಕುಟುಂಬಗಳ ಹೆಸರುಗಳನ್ನು ಇದೇ ಸಂದರ್ಭ ತಿಳಿಸಲಾಯಿತು.
ಅಳಮೇಂಗಡ ಕ್ರಿಕೆಟ್ ಕಪ್ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಕುಟುಂಬದ ಅಧ್ಯಕ್ಷ ವಿವೇಕ್, ಕಾರ್ಯದರ್ಶಿ ಮೋಹನ್ ಚೆಂಗಪ್ಪ, ಕುಟುಂಬ ಮಾಜಿ ಅಧ್ಯಕ್ಷರುಗಳಾದ ವಿಠಲ, ಮುದ್ದಪ್ಪ, ತಮ್ಮಯ್ಯ, ಸೋಮಯ್ಯ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬಾಳೆಲೆ ಕೊಡವ ಸಮಾಜ ಅಧ್ಯಕ್ಷ ಮಲ್ಚೀರ ಬೋಸ್ ಲಾಂಛನ ಬಿಡುಗಡೆಗೆ ಸಾಕ್ಷಿಯಾದರು.
ಈ ಸಂದರ್ಭ ಮಾತನಾಡಿದ ಅಳಮೇಂಗಡ ಕ್ರಿಕೆಟ್ ಕಪ್ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಕೌಟುಂಬಿಕ ಕ್ರೀಡಾಕೂಟಗಳಿಂದ ಹೆಚ್ಚಿನ ಮಕ್ಕಳು ಮೈದಾನದಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಕುಟುಂಬಸ್ಥರು ಒಗ್ಗೂಡಲು ಹಾಕಿ ಉತ್ಸವ ವೇದಿಕೆಯಾಗಿದೆ ಎಂದರು. ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮಾತನಾಡಿ, 18 ನೇ ವರ್ಷದ ಕ್ರಿಕೆಟ್ ಕಪ್ ನಲ್ಲಿ ಸುಮಾರು 250 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಬಾಳೆಲೆಯಲ್ಲಿ ಇಲ್ಲಿಯವರೆಗೆ ನಡೆದ ಕಾಂಡೇರ, ಬಲ್ಲಿಮಾಡ, ಅಡ್ಡೇಂಗಡ ಹಾಗೂ ಕೊಕ್ಕೇಂಗಡ ಕ್ರಿಕೆಟ್ ಕಪ್ ನಲ್ಲಿ ಹೆಚ್ಚಿನ ಕುಟುಂಬ ತಂಡಗಳು ಪಾಲ್ಗೊಂಡಿದ್ದವು. ಕೊಡವ ಕ್ರಿಕೆಟ್ ಇತಿಹಾಸದಲ್ಲಿ 228 ತಂಡಗಳು ಇಲ್ಲಿವರೆಗೆ ಪಾಲ್ಗೊಳ್ಳುವ ಮೂಲಕ ಹೆಚ್ಚಿನ ತಂಡ ಭಾಗಿಯಾದ ಇತಿಹಾಸ ಹೊಂದಿದೆ ಎಂದರು. ಕಾರ್ಯಕ್ರಮದಲ್ಲಿ ಲೋಗೋ ಡಿಸೈನರ್ ನಾಣಮಂಡ ಪೊನ್ನಣ್ಣ ಉಪಸ್ಥಿತರಿದ್ದರು.