ಮಂಡ್ಯ: ಯುವಕರನ್ನು ಕ್ರೀಡೆಯತ್ತ ಸೆಳೆಯುವ ಮತ್ತು ಕ್ರೀಡಾಕ್ಷೇತ್ರವನ್ನು ಅಭಿವೃದ್ದಿಪಡಿಸುವ ಸಂಕಲ್ಪತೊಟ್ಟಿರುವುದಾಗಿ ಯುವ ಸಬಲೀಕರಣ ಹಾಗೂ ಕ್ರೀಡಾಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ರೈತಸಂಘ, ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ ಹಾಗೂ ರಾಜ್ಯ ಖೋ-ಖೋ ಸಂಸ್ಥೆ ಬೆಂಗಳೂರು ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪರುಷರ ಹಾಗೂ ಮಹಿಳೆಯರ ಆಹ್ವಾನಿತ ಹೊನಲು ಬೆಳೆಕಿನ ಖೋ-ಖೋ ಪಂದ್ಯಾವಳಿಗೆ ಚಾಲನೆ ನೀಡಿ ನಂತರ ಮಾತನಾಡಿ, ರಾಜ್ಯದ 5 ಕಡೆಗಳಲ್ಲಿ ಕ್ರೀಡಾಪಟುಗಳು ಹಾಗೂ ಕ್ರೀಡಾಸಕ್ತರ ಸಭೆ ನಡೆಸಿ ಚರ್ಚಿಸಿದ್ದು, ಕ್ರೀಡೆಯಲ್ಲಿ ಹೊಸನೀತಿಗಳನ್ನು ಜಾರಿಗೊಳಿಸಿ ಕ್ರೀಡಾಕ್ಷೇತ್ರವನ್ನು ಅಭಿವೃದ್ದಿಪಡಿಸುವ ಸಂಕಲ್ಪ ತೊಟ್ಟಿದ್ದಾರೆ.
ರೈತರು ಹಾಗೂ ಕ್ರೀಡಾಪಟುಗಳು ಹೋರಾಟ ಮಾಡೋದು ಮಣ್ಣಿನಲ್ಲೇ. ರೈತರು ದೇಶಕ್ಕೆ ಆಹಾರ ನೀಡುವುದಕ್ಕಾಗಿ ಮಣ್ಣಿನಲ್ಲಿ ಶ್ರಮಪಟ್ಟರೆ, ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಾಧನೆ ಮಾಡುವುದಕ್ಕಾಗಿ ಮಣ್ಣಿನಲ್ಲೇ ಸೆಣಸಾಟ ನಡೆಸುತ್ತಾರೆ. ಹಾಗಾಗಿ ರೈತರು ಹಾಗೂ ಕ್ರೀಡೆಗೂ ಅವಿನಾಭವ ಸಂಬಂಧವಿದೆ ಎಂದು ಹೇಳಿದರು.
ಕ್ರೀಡಾ ಕ್ಷೇತ್ರವನ್ನು ಆಕರ್ಷಣೆಯ ಕ್ಷೇತ್ರವನ್ನಾಗಿ ಮಾಡಿ ಕ್ರೀಡಾ ಕ್ಷೇತ್ರದ ಉತ್ತಮ ಕ್ರೀಡಾಪಟುಗೆ ಶಿಕ್ಷಣದಲ್ಲಿ ಕೃಪಾಂಕಗಳನ್ನು ನೀಡುವ ಚಿಂತನೆ ನಡೆಸುತ್ತಿರುವುದಾಗಿ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರು ಮಹದೇವ, ಮೈಸೂರು ವಿವಿ ವಿಶ್ರಾಂತ ದೈಹಿಕ ನಿರ್ದೇಶಕ ಡಾ.ಸಿ.ಕೃಷ್ಣ, ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಸಂಘಟನಾ ಕಾರ್ಯದರ್ಶಿ ಕೆ.ಎಸ್.ನಂಜುಂಡೇಗೌಡ, ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಮೊದಲಾವರಿದ್ದರು.
ಈ ಸಂದರ್ಭ ಪುರುಷರ ಹೊನಲು ಬೆಳೆಕಿನ ಖೋ-ಖೋ ಪಂದ್ಯಾವಳಿ ನಡೆದು ದಕ್ಷಿಣ ಕನ್ನಡದ ಆಳ್ವಾಸ್ ಮತ್ತು ಬ್ಯಾಡಗಿ ಸ್ಪೋಟ್ಸ್ಕಬ್ಲ್ ನಡುವಿನ ಪಂದ್ಯದಲ್ಲಿ 12-8 ಅಂಕಗಳ ಅಂತರದಲ್ಲಿ ದಕ್ಷಿಣ ಕನ್ನಡ ಆಳ್ವಾಸ್ ತಂಡ ಗೆಲವು ಪಡೆಯಿತು. ಸ್ಪಂದನ ಚಳ್ಳಕೆರೆ ಮತ್ತು ಕ್ಯಾತನಹಳ್ಳಿ `ಬಿ’ ನಡುವಿನ ಪಂದ್ಯದಲ್ಲಿ 12-10 ಅಂಕಗಳ ಅಂತರದಲ್ಲಿ ಸ್ಪಂದನ ಚಳ್ಳಕೆರೆ ತಂಡ ಗೆಲುವು ಸಾಧಿಸಿತು.
ಲೀಗ್ ಮಹಿಳಾ ವಿಭಾಗದಲ್ಲಿ ಎಫ್ಯುಎಸ್ಸಿ ಮೈಸೂರು ಮತ್ತು ಎಸ್ಸಿವೈಸಿ ಗುಬ್ಬಿ ತಂಡಗಳ ನಡುವೆ ಸ್ಪರ್ಧೆ ನಡೆದು 17-6 ಅಂಕಗಳ ಅಂತರದಲ್ಲಿ ಎಫ್ಯುಎಸ್ಸಿ ಮೈಸೂರು ತಂಡ ಗೆಲುವು ಸಾಧಿಸಿತು. ದಕ್ಷಿಣ ಕನ್ನಡ ಆಳ್ವಾಸ್ ಮತ್ತು ಎಬಿಎಸ್ಸಿ ರಾಯಚೂರು ತಂಡಗಳ ನಡುವಿನ ಸೆಣಸಾಟದಲ್ಲಿ 10-6 ಅಂಕಗಳ ಅಂತರದಲ್ಲಿ ದಕ್ಷಿಣ ಕನ್ನಡ ಆಳ್ವಾಸ್ ತಂಡ ಗೆಲುವಿನ ಕೇಕೆ ಹಾಕಿತು.