ಮಡಿಕೇರಿ: ಕೊಡಗಿನಲ್ಲಿ ಪ್ರತಿವರ್ಷ ಹಾಕಿ ಉತ್ಸವ ನಡೆಸುತ್ತಾ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಹೊಸತೇನಲ್ಲ. ಇದೀಗ ಭಾರತ ಹಾಕಿ ತಂಡದ ಬಾಗಿಲು ಬಡಿಯಲು ದಕ್ಷಿಣ ಕೊಡಗಿನ ಬೆಕ್ಕೆಸೊಡ್ಲೂರು ಗ್ರಾಮದ ಮಲ್ಲಮಾಡ ಜಯ ಹಾಗೂ ವಾಣಿ ದಂಪತಿಯ ಪುತ್ರಿ.ಲೀಲಾವತಿ ಸಿದ್ಧಳಾಗಿದ್ದಾಳೆ.
ಈಕೆ 18ರ ವಯೋಮಿತಿಯೊಳಗಿನ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, 18ರ ವಯೋಮಿತಿಯೊಳಗಿನ ಏಷ್ಯಾ ಕಪ್ ಹಾಕಿ ಪಂದ್ಯಾಟದಲ್ಲಿ ಪಾಲ್ಗೊಂಡು ಎಂಟು ರಾಷ್ಟ್ರಗಳು ಪಾಲ್ಗೊಂಡಿದ್ದ ಈ ಏಷ್ಯಾ ಕಪ್ ಹಾಕಿಯಲ್ಲಿ ತನ್ನ ಪ್ರತಿಭೆಯನ್ನು ಮೆರೆದಿದ್ದಾಳೆ. ಬ್ಯಾಂಕಾಕ್ ನಲ್ಲಿ ಡಿ. 22ರಂದು ನಡೆದ ಪಂದ್ಯದಲ್ಲಿ ಭಾರತದ ಯುವತಿಯರು ಕಂಚಿನ ಪದಕದ ಸಾಧನೆ ಮಾಡಿದ್ದು, ಆ ತಂಡದಲ್ಲಿ ಕರ್ನಾಟಕ ರಾಜ್ಯದ ಏಕೈಕ ಆಟಗಾರ್ತಿ, ಕೊಡಗಿನ ಪ್ರತಿಭೆ ಲೀಲಾವತಿ ಇದ್ದಳು ಎಂಬುದೇ ಹೆಮ್ಮೆಯ ವಿಷಯವಾಗಿದೆ. ಈ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ, ಜಪಾನ್, ಕೊರಿಯಾ, ಥೈಲ್ಯಾಂಡ್, ಮಲೇಷಿಯಾ, ಸಿಂಗಾಪುರ್, ಚೈನೀಸ್ ಥೈಪೆ ಹಾಗೂ ಚೈನಾದ ತಂಡಗಳು ಪಾಲ್ಗೊಂಡಿದ್ದವು.
ಈಕೆ ಮಡಿಕೇರಿಯ ಸಾಯಿ ಕ್ರೀಡಾ ವಸತಿ ನಿಲಯದ ಆಟಗಾರ್ತಿಯಾಗಿದ್ದು, ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ಓದುತ್ತಿದ್ದಾಳೆ. ಚೊಚ್ಚಲ ಪಂದ್ಯದಲ್ಲಿ ಭಾರತ 4-0 ಗೋಲಿನಿಂದ ಜಯ ಸಾಧಿಸಿದ್ದು, ಇದರಲ್ಲಿ ಪ್ರಥಮ ಗೋಲು ದಾಖಲಿಸಿದ್ದು, ಮುನ್ನಡೆ ಆಟಗಾರ್ತಿಯಾದ ಕೊಡಗಿನ ಲೀಲಾವತಿ. ಲೀಗ್ ಹಂತದ ಎಲ್ಲಾ ಪಂದ್ಯದಲ್ಲಿ ಜಯಗಳಿಸಿದ್ದ ಭಾರತ ಸೆಮಿಪೈನಲ್ನಲ್ಲಿ ಕೊನೆಯ ಕ್ಷಣದಲ್ಲಿ ಎಡವಿ ಫೈನಲ್ ತಲುಪಲು ವಿಫಲವಾದರೂ ಕಂಚಿನ ಪದಕಕ್ಕೆ ನಡೆದ ಪಂದ್ಯದಲ್ಲಿ ಕೊರಿಯಾ ತಂಡವನ್ನು 3-0 ಗೋಲಿನಿಂದ ಮಣಿಸಿ ಕಂಚಿನ ಪದಕದ ಸಾಧನೆ ಮಾಡಿದ್ದು ಇತಿಹಾಸ.
ಭಾರತ ಸೀನಿಯರ್ ತಂಡದಲ್ಲಿ ಸ್ಥಾನ ಪಡೆಯುವದರೊಂದಿಗೆ ಒಲಂಪಿಕ್ಸ್ ಆಡುವ ಗುರಿಯನ್ನು ಲೀಲಾವತಿ ಹೊಂದಿದ್ದಾಳೆ. ಆಕೆ ಗುರಿ ತಲುಪಲು ಮನೆಯವರು ಸೇರಿದಂತೆ ಅವರದೇ ಕುಟುಂಬದ ಆಟಗಾತರ್ಿ ಪೊನ್ನಮ್ಮ ಸೇರಿದಂತೆ ಪೊನ್ನಂಪೇಟೆ ಸೆಂಟ್ ಆಂಟನಿ ಶಾಲೆಯ ದೈಹಿಕ ಶಿಕ್ಷಕ ಅರುಣ್, ಸಾಯಿ ತರಬೇತುದಾರರಾದ ಮುತ್ತು ಕುಮಾರ್, ಸುರೇಶ್ ಎಡಿನಾ, ವಿವೇಕ್ ಚತುರ್ವೇದಿ, ಮಡಿಕೇರಿ ಜೂನಿಯರ್ ಕಾಲೇಜಿನ ಶ್ರೀನಿವಾಸ್ ಮೊದಲಾದವರು ನೀರೆರೆದು ಪೋಷಿಸುತ್ತಿದ್ದಾರೆ.