ವಿರಾಜಪೇಟೆ: ಕಂಡಂಗಾಲದ ಕಡಚಿಬಾಣೆ ಕ್ರೀಡೆ, ಕಲೆ, ಸಾಹಿತ್ಯ ಸಾಂಸ್ಕೃತಿಕ ಸಮಿತಿ ವತಿಯಿಂದ ಕಂಡಂಗಾಲದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಪುರುಷರ ಅಂತರ ಕಾಲೇಜು ಹಾಕಿ ಪಂದ್ಯಾವಳಿಯಲ್ಲಿ ಪೊನ್ನಂಪೇಟೆಯ ಸ್ಪೋರ್ಟ್ಸ್ ಹಾಸ್ಟೆಲ್ ತಂಡವು ಕಾವೇರಿ ಕಾಲೇಜು ತಂಡವನ್ನು 3-1 ಗೋಲುಗಳ ಅಂತರದಲ್ಲಿ ಮಣಿಸಿ ಗೆಲುವು ಪಡೆದುಕೊಂಡಿದೆ.
ವಿಜೇತ ಪೊನ್ನಂಪೇಟೆಯ ಸ್ಪೋರ್ಟ್ಸ್ ಹಾಸ್ಟೆಲ್ ತಂಡದ ಪರ 35 ಹಾಗೂ 46 ನೇ ನಿಮಿಷದಲ್ಲಿ ಆಶಿಕ್, 59 ನೇ ನಿ.ದಲ್ಲಿ ಸೂರ್ಯ ಗೋಲು ದಾಖಲಿಸಿದರೆ ಪರಾಜಿತ ತಂಡದ ಪರ 40ನೇ ನಿಮಿಷದಲ್ಲಿ ಚಲನ್ ಏಕೈಕ ಗೋಲು ಗಳಿಸಿದರು. ಪಂದ್ಯಾಟದ ತೀರ್ಪುಗಾರರಾಗಿ ಬೊಳ್ಳಚಂಡ ನಾಣಯ್ಯ ಹಾಗೂ ಕುಪ್ಪಂಡ ದಿಲನ್, ತಾಂತ್ರಿಕ ವಿಭಾಗದಲ್ಲಿ ಮೂಕಚಂಡ ನಾಚಪ್ಪ ಹಾಗೂ ಮಚ್ಚಾರಂಡ ಪ್ರವೀಣ್ ಕಾರ್ಯ ನಿರ್ವಹಿಸಿದರು. ಕಬಡ್ಡಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಕುಂದ ತಂಡವು ಬೇಗೂರು ತಂಡವನ್ನು 38-11 ಅಂಕಗಳಿಂದ ಮಣಿಸಿ ಗೆಲುವಿನ ನಗೆ ಬೀರಿತು.
ಸಮಾರೋಪ ಸಮಾರಂಭದಲ್ಲಿ ವಿನ್ನರ್ಸ್ ಟ್ರೋಫಿ ದಾನಿಗಳಾದ ಬಲ್ಲಡಿಚಂಡ ನಾಚಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಪ್ಪಂಡೇರಂಡ ಭವ್ಯ ಚಿಟ್ಟಿಯಣ್ಣ, ಬಲ್ಲಡಿಚಂಡ ಚೋಂದಮ್ಮ, ಮಾಜಿ ಕ್ರೀಡಾ ಅಧ್ಯಕ್ಷರಾದ ಕೊಂಗಾಂಡ ಭೀಮಯ್ಯ, ಕ್ರೀಡಾ ಸಮಿತಿಯ ಅಧ್ಯಕ್ಷ ಮುಲ್ಲೇಂಗಡ ಸಿ.ಅಶೋಕ್ ಇದ್ದರು.