ಮಡಿಕೇರಿ: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಜ.7, 8 ಹಾಗೂ 14 ಮತ್ತು 15 ರಂದು ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿ ಗುಡ್ಡೆಹೊಸೂರಿನಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ನ ಜಿಲ್ಲಾಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ನಾಲ್ಕು ದಿನಗಳ ಕಾಲ ನಡೆಯುವ ಫುಟ್ಬಾಲ್ ಪಂದ್ಯಾವಳಿ ಕುರಿತು ಮಾಹಿತಿ ನೀಡಿದರು. ಪಂದ್ಯಾವಳಿಯಲ್ಲಿ 13 ಪುರುಷ ತಂಡಗಳು ಮತ್ತು 4 ಮಹಿಳಾ ತಂಡಗಳು ಸೇರಿದಂತೆ ಒಟ್ಟು 17 ತಂಡಗಳು ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು.
ಪಂದ್ಯಾವಳಿಯ ‘ಎ’ ಗುಂಪಿನಲ್ಲಿ ನೇತಾಜಿ ಯುವಕ ಸಂಘ, ಚೇತನ್ ಯೂತ್ ಕ್ಲಬ್ ಮತ್ತು ರೊಜಾರಿಯನ್ ತಂಡ, ‘ಬಿ’ ಗುಂಪಿನಲ್ಲಿ ಕ್ಯಾಪ್ಟನ್ ಇಲೆವೆನ್, ಮ್ಯಾನ್ಸ್ ಕಾಂಪೌಂಡ್ ಕ್ಲಬ್, ಚೆಲ್ಸಿ ಯೂತ್ ಕ್ಲಬ್, ‘ಸಿ’ ಗುಂಪಿನಲ್ಲಿ ಭಗವತಿ ಯೂತ್ ಕ್ಲಬ್, ಯಂಗ್ ಬಾಯ್ಸ್ ಪನ್ಯ, ಆಕ್ಸ್ಫರ್ಡ್ ಕ್ಲಬ್ ಮತ್ತು ‘ಡಿ’ ಗುಂಪಿನಲ್ಲಿ ಮಿಲನ್ಸ್ ಕ್ಲಬ್, ವೈಷ್ಣವಿ ಕ್ಲಬ್, ಸಾಗರ್ ಕ್ಲಬ್ ಮತ್ತು ಭಾರತ್ ಮಾತಾ ತಂಡಗಳು ಪಾಲ್ಗೊಳ್ಳಲಿವೆ. ಜ.15 ರಂದು ಸೆಮಿಫೈನಲ್ ಮತ್ತು ಅಂತಿಮ ಪಂದ್ಯಗಳು ನಡೆಯಲಿದೆ.
ಕೊಡಗು ಜಿಲ್ಲೆಯ ಫುಟ್ಬಾಲ್ ಪ್ರತಿಭೆಗಳನ್ನು ಗುರುತಿಸಿ ಪ್ರ್ರೋತ್ಸಾಹಿಸುವ ಪ್ರಮುಖ ಉದ್ದೇಶದೊಂದಿಗೆ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಈ ಪಂದ್ಯಾವಳಿಯ ಮೂಲಕ ಅತ್ಯುತ್ತಮ ಆಟಗಾರರ ಕೊಡಗು ತಂಡವನ್ನು ಆಯ್ಕೆ ಮಾಡಿ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಲಾಗುತ್ತದೆ ಮತ್ತು ಇದು ರ್ಯಾಂಕಿಂಗ್ ಪಂದ್ಯಾವಳಿಯೂ ಆಗಿದೆಯೆಂದು ಮಾಹಿತಿ ನೀಡಿದರು. ಪಂದ್ಯಾವಳಿ ಗುಡ್ಡೆಹೊಸೂರಿನ ಐಚೆಟ್ಟೀರ ನರೇನ್ ಸುಬ್ಬಯ್ಯ ಫುಟ್ಬಾಲ್ ಕೇಂದ್ರ್ರದ ಮೈದಾನದಲ್ಲಿ ನಡೆಯಲಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಫುಟ್ಬಾಲ್ ಆಟಗಾರರನ್ನು ಪ್ರೋತ್ಸಾಹಿಸುವ ಅಗತ್ಯವಿ ದೆಯಾದರು ಮೈದಾನದ ಕೊರತೆ ಇದೆಯೆಂದು ಅಭಿಪ್ರಾಯಪಟ್ಟರು.
ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಐಚೆಟ್ಟೀರ ಪೊನ್ನಪ್ಪ ಮಾತನಾಡಿ, ಗುಡ್ಡೆಹೊಸೂರಿನಲ್ಲಿ ಪಂದ್ಯಾವಳಿಗಾಗಿ ಮೈದಾನದ ಸಿದ್ಧತಾ ಕಾರ್ಯ ಅಂತಿಮ ಹಂತದಲ್ಲಿದೆ. ಆಟಗಾರರನ್ನೆ ಗುರಿಯಾಗಿಸಿಕೊಂಡು ತಾಂತ್ರಿಕವಾಗಿ ಮೇಲ್ದರ್ಜೆಯ ಮೈದಾನವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು. ಸುಮಾರು 9.80 ಏಕರೆ ಪ್ರದೇಶದಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣವನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಪ್ರಸಕ್ತ ಸಾಲಿನ ಏಪ್ರಿಲ್ನಲ್ಲಿ ಅತ್ಯುನ್ನತ ಗುಣಮಟ್ಟದ ಫುಟ್ಬಾಲ್ ತರಬೇತಿ ಶಿಬಿರ 6 ರಿಂದ 18 ವರ್ಷ ವಯೋಮಿತಿಗೆ ಒಳಪಟ್ಟ ಮಕ್ಕಳಿಗೆ ಆಯೋಜಿಸಲಾಗಿದೆ ಎಂದು ಪೊನ್ನಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಸದಸ್ಯರಾದ ಜಗದೀಶ್ ಉಪಸ್ಥಿತರಿದ್ದರು.