ಕೋಲ್ಕತ್ತಾ: ಭಾನುವಾರ ನಡೆಯಲಿರುವ ಈಡನ್ ಗಾರ್ಡ್ನ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕುಟುಂಬಸ್ಥರು ಹಾಜರಿರಲಿದ್ದಾರೆ ಎಂದು ತಿಳಿದು ಬಂದಿದೆ.
ನಾಯಕನ ಸ್ಥಾನದಿಂದ ಕೆಳಗಿಳಿದ ಬಳಿಕ ಧೋನಿ ಭರ್ಜರಿ ಶತಕ ಸಿಡಿಸಿದ್ದಾರೆ. ಕಟಕ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಧೋನಿ 122 ಎಸೆತಗಳಲ್ಲಿ ಭರ್ಜರಿ 134 ರನ್ ಬಾರಿಸಿದ್ದರು. ಧೋನಿಯ ಈ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್ಗಳು ಇದ್ದವು. ಅಲ್ಲದೆ ಈ ಪಂದ್ಯದಲ್ಲಿ ಭಾರತ 15 ರನ್ಗಳಿಂದ ಗೆಲುವು ಪಡೆದಿತ್ತು. ಧೋನಿ ಟೀಂ ಇಂಡಿಯಾದ ಟಿ-20 ಮತ್ತು ಏಕದಿನ ತಂಡಗಳ ನಾಯಕತ್ವದಿಂದ ಕೆಳಗಿಳಿದ ನಂತರ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾದ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿತ್ತು.
ಭಾನುವಾರ ನಡೆಯಲಿರುವ ಪಂದ್ಯಕ್ಕೂ ಮುನ್ನ ಧೋನಿ ಅವರನ್ನು ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಸನ್ಮಾನಿಸಲಿದೆ ಎಂದು ತಿಳಿದು ಬಂದಿದೆ.