ಪಿರಿಯಾಪಟ್ಟಣ: ಮೂರು ದಿನಗಳ ಕಾಲ ಪಟ್ಟಣದಲ್ಲಿ ನಡೆದ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪಿರಿಯಾಪಟ್ಟಣದ ಸಿಟಿ ಹಂಟರ್ಸ್ ಫುಟ್ಬಾಲ್ ಕ್ಲಬ್ ಕೊಡಗಿನ ಸುಂಟಿಕೊಪ್ಪದ ಮಿಡ್ ಸಿಟಿ ಫುಟ್ಬಾಲ್ ಕ್ಲಬ್ ವಿರುದ್ಧ ಜಯಗಳಿಸುವ ಮೂಲಕ ರೂ.40 ಸಾವಿರ ನಗದು ಬಹುಮಾನದೊಂದಿಗೆ ಸ್ಯಾನ್ಸಿಟಿ ಕಪ್ನ್ನು ತನ್ನದಾಗಿಸಿಕೊಂಡಿದೆ.
ಆರಂಭದಿಂದಲೂ ಪಂದ್ಯ ಕುತೂಹಲ ಕೆರಳಿಸಿತ್ತು. ಫೈನಲ್ ಪಂದ್ಯದ ವೇಳೆ ಸ್ಥಳೀಯ ಪ್ರೇಕ್ಷಕರ ಬೆಂಬಲದೊಂದಿಗೆ ಕಣಕ್ಕಿಳಿದ ಪಟ್ಟಣದ ಸಿಟಿ ಹಂಟರ್ಸ್ ಫುಟ್ಬಾಲ್ ಕ್ಲಬ್ ಕೊಡಗಿನ ಸುಂಟಿಕೊಪ್ಪದ ಮಿಡ್ ಸಿಟಿ ಫುಟ್ಬಾಲ್ ಕ್ಲಬ್ ವಿರುದ್ಧ 1-0 ಅಂತರದಲ್ಲಿ ರೋಚಕ ಜಯಸಾಧಿಸುವಲ್ಲಿ ಆಟಗಾರರು ಯಶಸ್ವಿಯಾದರು. ಫೈನಲ್ ಪಂದ್ಯದಲ್ಲಿ ಸೋತ ಕೊಡಗಿನ ಸುಂಟಿಕೊಪ್ಪದ ಮಿಡ್ಸಿಟಿ ಪುಟ್ಬಾಲ್ ಕ್ಲಬ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ರೂ.20 ಸಾವಿರ ನಗದು ಮತ್ತು ಟ್ರೋಫಿ ಪಡೆಯಿತು.
ಪಂದ್ಯಾವಳಿಯಲ್ಲಿ ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಪಾಲಿಬೆಟ್ಟ ತಂಡದ ಆಟಗಾರ ಮಣಿ ಪಡದರೆ, ಉತ್ತಮ ರಕ್ಷಣಾ ಆಟಗಾರನಾಗಿ ಮಿಡ್ ಸಿಟಿ ತಂಡದ ಆಟಗಾರ ಬಾಲಸುಬ್ರಮಣ್ಯ ಪಡೆದರು. ಉತ್ತಮ ಆಟಗಾರರನಾಗಿ ಗೋಲ್ಡನ್ ಸ್ಟ್ರೈಕರ್ಸ್ ತಂಡದ ಶಾಹಿಬ್ ಪಡೆದು ಕೊಂಡರೆ, ಬೆಸ್ಟ್ ಸೆಮಿಫೈನಲಿಸ್ಟ್ ತಂಡವಾಗಿ ಪಾಲಿಬೆಟ್ಟದ ನೆಹರೂ ಎಫ್ಸಿ ತಂಡ ಬಹುಮಾನ ಪಡೆಯಿತು.