ಮಡಿಕೇರಿ: ಕಾರ್ಮಾಡು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ರಾಜ್ಯ ಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾವಳಿ ಏ.14 ರಿಂದ 16 ರವರೆಗೆ ಅಮ್ಮತ್ತಿಯಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್.ಎ.ಅಭಿಜಿತ್, ಇದೇ ಮೊದಲ ಬಾರಿಗೆ ಆಯೋಜಿಸಿರುವ ರಾಜ್ಯ ಮಟ್ಟದ ಕಾಲ್ಚೆಂಡು ಪಂದ್ಯಾವಳಿ ಮೂರು ದಿನಗಳ ಕಾಲ ಅಮ್ಮತ್ತಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಒಂದು ತಂಡದಲ್ಲಿ 7+3 ಆಟಗಾರರಿಗೆ ಮಾತ್ರ ಅವಕಾಶವಿದ್ದು, ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ ರೂ.30 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ.20 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದು ಹೆಚ್.ಎ.ಅಭಿಜಿತ್ ಹೇಳಿದರು.
ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಮಾ.30 ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು : 84958 49418, 98807 91624, 94826 44300, 94497 47142.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಹೆಚ್.ಸಿ.ಗೌತಮ್, ಖಜಾಂಚಿ ಹೆಚ್.ಜಿ.ಮಧು, ಸಹ ಕಾರ್ಯದರ್ಶಿ ಮಿಥುನ್ ಹಾಗೂ ಶ್ರೀನಿವಾಸ್ ಬೋಜಣ್ಣ ಉಪಸ್ಥಿತರಿದ್ದರು.