ಮಂಡ್ಯ: ಸಾಮಾನ್ಯವಾಗಿ ಎನ್ಎಸ್ಎಸ್ ವಾರ್ಷಿಕ ಶಿಬಿರಗಳಲ್ಲಿ ಯಾವುದಾದರೊಂದು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದರಲ್ಲೂ ಮೈದಾನದಲ್ಲಿ ಯಾವುದಾದರೊಂದು ಕ್ರೀಡಾಕೂಟಗಳನ್ನು ನಡೆಸಲಾಗುತ್ತದೆ. ಆದರೆ ಮದ್ದೂರಿನ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಮಹಿಳಾ ಸರ್ಕಾರಿ ಕಾಲೇಜು ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರ ವಿಭಿನ್ನ ಮತ್ತು ವಿಶಿಷ್ಟವಾಗಿತ್ತು.
ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡುವ ಸಲುವಾಗಿ ನಡೆಸಲಾದ ಕೆಸರುಗದ್ದೆ ಕ್ರೀಡಾಕೂಟ ನೆರೆದವರನ್ನು ಮನರಂಜಿಸಿತಲ್ಲದೆ, ಸ್ಪರ್ಧೆಗಳಿಗೆ ಹುಮ್ಮಸ್ಸು ನೀಡಿತು. ಗ್ರಾಮೀಣ ಕ್ರೀಡೆಗಳಾದ ನೀರು ತುಂಬಿದ ಬಿಂದಿಗೆ ಓಟ, ಕೂಸುಮರಿ ಓಟ, ಕೆಸರು ಗದ್ದೆ ಓಟ, ಜೋಡೆತ್ತಿನ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳ ಪೈಕಿ ಕೆಲವರು ಕೆಸರಿನಲ್ಲಿ ಬಿದ್ದು ಎದ್ದು ಓಡಿ ಗೆಲುವು ಸಾಧಿಸಿದರೆ, ಮತ್ತೆ ಕೆಲವರು ಗೆಲುವು ಮುಖ್ಯವಲ್ಲ ಸ್ಪರ್ಧಿಸೋದು ಮುಖ್ಯ ಎನ್ನುವ ರೀತಿಯಲ್ಲಿ ಭಾಗವಹಿಸಿ ಮನರಂಜಿಸಿದರು.
ಸೋಮನಹಳ್ಳಿ ಗ್ರಾ.ಪಂ. ಸದಸ್ಯ ಅಪ್ಪೇಗೌಡ ಉದ್ಘಾಟಿಸಿದ ಕ್ರೀಡಾಕೂಟದಲ್ಲಿ ಮನ್ಮುಲ್ ಮಾಜಿ ನಿರ್ದೇಶಕ ಕುಮಾರ್ಕೊಪ್ಪ ಮಾತನಾಡಿ, ನಮ್ಮ ಪೂರ್ವಜರು ರೂಢಿಸಿಕೊಂಡಿದ್ದ ಸಂಸ್ಕೃತಿ ಇಂದು ಮರೆಯಾಗುತ್ತಿರುವುದರಿಂದ ಗುರು – ಹಿರಿಯರಲ್ಲಿ ಗೌರವ ಮನೋಭಾವನೆ ಕ್ಷೀಣಿಸುತ್ತಿದೆ. ಆಧುನಿಕ ಕ್ರೀಡೆಗಳ ಭರಾಟೆಯಲ್ಲಿ ಹಲವು ಗ್ರಾಮೀಣ ಕ್ರೀಡೆಗಳು ಅವಸಾನ ಕಂಡಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜಾ ಟ್ರಸ್ಟ್ ನ ಅಧ್ಯಕ್ಷ ಡಿ.ಕೆ.ಮೋಹನ್ ಕುಮಾರ್ ವಹಿಸಿದ್ದರು. ಸ್ವಾಮಿ ವಿವೇಕಾನಂದ ಕ್ರೀಡಾ ಸಂಘದ ಅಧ್ಯಕ್ಷ ಲಾರಾ ಪ್ರಸನ್ನ, ಎನ್ಎಸ್ಎಸ್ ಅಧಿಕಾರಿಗಳಾದ ಚಂದ್ರು, ಎಚ್.ಎಂ.ಪ್ರಭಾ ಹಾಜರಿದ್ದರು.