ಮಡಿಕೇರಿ: ಬೇಸಿಗೆ ಬರುತ್ತಿದ್ದಂತೆಯೇ ಕೊಡಗಿನಲ್ಲಿ ವಿವಿಧ ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತಿದ್ದು, ಒಂದೊಂದು ಸಮಾಜವೂ ಕ್ರೀಡಾಕೂಟವನ್ನು ಹಬ್ಬದಂತೆ ಆಚರಿಸುತ್ತಿರುವುದು ಇತ್ತೀಚೆಗಿನ ಬೆಳವಣಿಗೆಯಾಗಿದೆ.
ಈ ಬಾರಿಯೂ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹಾಗೂ ಬಿಳಿಗೇರಿಯ ಪೈಕೆರ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಏ.21 ರಿಂದ ಮೇ 7ರವರೆಗೆ `ಪೈಕೆರ ಕಪ್-2017′ ಕ್ರಿಕೆಟ್ ಹಬ್ಬ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ವಿಷಯವನ್ನು ವೇದಿಕೆಯ ಅಧ್ಯಕ್ಷರಾದ ಪೈಕೆರ ಮನೋಹರ್ ಮಾದಪ್ಪ ತಿಳಿಸಿದ್ದಾರೆ. ಪಂದ್ಯಾವಳಿ ಆಯೋಜನೆಯ ಜವಾಬ್ದಾರಿಯನ್ನು ಯುವ ವೇದಿಕೆ ವಹಿಸಿಕೊಂಡ ನಂತರ ನಾಲ್ಕನೇ ಕ್ರಿಕೆಟ್ ಹಬ್ಬ ಇದಾಗಿದೆಯಲ್ಲದೆ, ಕೊಡಗು ಗೌಡ ಸಾಂಸ್ಕೃತಿಕ ಅಕಾಡೆಮಿ ಮೂಲಕ ನಡೆಯುತ್ತಿದ್ದ ಪಂದ್ಯಗಳು ಸೇರಿ ಇದು 18ನೇ ಪಂದ್ಯಾವಳಿಯಾಗಿದೆ. ಈ ಬಾರಿ ಸುಮಾರು 200ಕ್ಕೂ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದ ಅವರು ಪಂದ್ಯಾವಳಿಗಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಿಕೊಂಡು ಅಗತ್ಯ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕೇವಲ ಕ್ರಿಕೆಟ್ ಅಲ್ಲದೆ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಬಾರಿ ವಿಶೇಷವಾಗಿ ಮಹಿಳೆಯರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲು ನಿರ್ಧರಿಸಲಾಗಿದೆ. ಹೆಸರು ನೋಂದಣಿಗಾಗಿ ತಂಡಗಳು ಪುದಿಯನೆರವನ ರಿಷಿತ್ ಮೊ.9972376151, ಪ್ರಸಾದ್ ಅಚ್ಚಲ್ಪಾಡಿ ಮೊ.9481770780, ಮನೋಜ್ ಮೂಲೆಮಜಲು ಮೊ.9483111134, ಗಗನ್ ಪೈಕೆರ ಮೊ.9483487901 ಇವರನ್ನು ಸಂಪರ್ಕಿಸಬಹುದಾಗಿದ್ದು, ಏ.10ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.