ಮೂಡುಬಿದಿರೆ: ಎಂ.ಕೆ. ಅನಂತರಾಜ್ ಅವರ ಸ್ಮರಣಾರ್ಥ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿಯ ಮೈದಾನದಲ್ಲಿ ನಡೆಯುತ್ತಿರುವ 62ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಎರಡನೇ ದಿನ ಕಳೆದ ಬಾರಿ ಚಾಂಪಿಯನ್ ಇಂಡಿಯನ್ ರೈಲ್ವೇಸ್, ಅತಿಥೇಯ ಕರ್ನಾಟಕ, ಕಳೆದ ಬಾರಿಯ ರನ್ನರ್ ಅಪ್ ತೆಲಂಗಾಣ ಸೇರಿದಂತೆ ಪುರುಷರ ವಿಭಾಗದಲ್ಲಿ ಒಟ್ಟು ಆರು ತಂಡಗಳು ಕ್ವಾರ್ಟರ್ ಫೈನಲ್ ಹಂತವನ್ನು ತಲುಪಿವೆ. ಮಹಿಳಾ ವಿಭಾಗದಲ್ಲೂ ಕರ್ನಾಟಕ ತಂಡ ಸಹಿತ ಒಟ್ಟು ಆರು ತಂಡಗಳು ಕ್ವಾರ್ಟರ್ ಫೈನಲ್ ಗೆ ಅರ್ಹತೆಯನ್ನು ಪಡೆದುಕೊಂಡಿವೆ.
ಪುರುಷರ ವಿಭಾಗದಲ್ಲಿ ಆಂದ್ರಪ್ರದೇಶ, ತಮಿಳುನಾಡು, ಮುಂಬೈ, ಮಹಿಳೆಯರ ವಿಭಾಗದಲ್ಲಿ ತಮಿಳುನಾಡು, ಕೇರಳ, ಆಂದ್ರ ಪ್ರದೇಶ, ಛತೀಸ್ ಗಡ್ ಮಹಾರಾಷ್ಟ್ರ ತಂಡಗಳು ಸೋಮವಾರ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿದ ಇತರ ತಂಡಗಳಾಗಿವೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ.
ಕರ್ನಾಟಕ ಪುರಷರ ತಂಡವು ಪುದುಚೆರಿ ತಂಡವನ್ನು 35-23, 35-29 ಅಂಕಗಳ ನೇರ ಸೆಟ್ ನಲ್ಲಿ ಗೆಲುವು ಸಾಧಿಸುವುದರೊಂದಿಗೆ ಕ್ವಾರ್ಟರ್ ಫೈನಲ್ ಗೆ ತಲುಪಿದರೇ, ಮೊದಲ ದಿನ ಎರಡೂ ಪಂದ್ಯಗಳಲ್ಲಿ ಜಯಗಳಿಸಿ ಮಹಿಳಾ ತಂಡವು ಎರಡನೇ ದಿನದಂದು ಆಂದ್ರಪ್ರದೇಶವನ್ನು 35-17,35-11ರ ನೇರ ಸೆಟ್ ಗಳಿಂದ ಸೋಲುಸಿದೆ. ತಾನಾಡಿದ ಮೂರು ಪಂದ್ಯಗಳನ್ನು ಗೆದ್ದುಕೊಂಡಿರುವ ಕರ್ನಾಟಕ ಮಹಿಳಾ ತಂಡವು ಮುನ್ನಡೆಯನ್ನು ಸಾಧಿಸಿದೆ.