ಮುಂಬೈ: 2ನೇ ಪಂದ್ಯದಲ್ಲಿ ಕೊಹ್ಲಿ ಪಡೆ ಖಂಡಿತಾ ತಿರುಗಿ ಬೀಳುತ್ತದೆ ಎಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತು ಟೀಕೆಗೆ ಗುರಿಯಾಗಿರುವ ಟೀಂ ಇಂಡಿಯಾ ಪರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡಿದ್ದಾರೆ.
ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 333 ರನ್ ಗಳ ಅಂತರದ ಹೀನಾಯ ಸೋಲು ಕಂಡಿತ್ತು. ಭಾರತದ ಬ್ಯಾಟಿಂಗ್ ಬಗ್ಗೆ ತೀವ್ರ ಟೀಕೆಗಳು ಕೇಳಿಬಂದಿದ್ದು, ಈ ಹಿನ್ನೆಲೆ ಮಾತನಾಡಿದ ತೆಂಡೂಲ್ಕರ್ ಅವರು ಇನ್ನೂ ಸರಣಿ ಮುಗಿದಿಲ್ಲ. ಭಾರತ ತಂಡ ಮುಂದಿನ ಪಂದ್ಯದಲ್ಲಿ ಖಂಡಿತ ತಿರುಗೇಟು ನೀಡುತ್ತದೆ ಎಂದು ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ಮುಂಬೈನಲ್ಲಿ ನಡೆದ ಮ್ಯಾರಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮೊದಲ ಟೆಸ್ಟ್ ಪಂದ್ಯವನ್ನಷ್ಟೇ ಸೋತಿರುವುದು. ಸರಣಿಯನ್ನಲ್ಲ. ಇನ್ನೂ ಸರಣಿ ಬಾಕಿ ಇದೆ. ಮುಂದಿನ ಪಂದ್ಯದಲ್ಲಿ ಖಂಡಿತಾ ಆಸಿಸ್ ತಂಡಕ್ಕೆ ತಿರುಗೇಟು ನೀಡಲಿದೆ ಎಂದು ಹೇಳಿದರು.
ಪ್ರತಿ ಸರಣಿಯಲ್ಲಿ ಕಠಿಣ ಕ್ಷಣಗಳಿರುತ್ತವೆ. ಅದನ್ನು ಯಶಸ್ವಿಯಾಗಿ ದಾಟಿದಲ್ಲಿ ಮಾತ್ರ ಯಶಸ್ಸು ಸಾಧ್ಯ. ನಿಜಕ್ಕೂ ಪುಣೆ ಪಂದ್ಯ ಕಠಿಣವಾಗಿತ್ತು. ಆದರೆ ಪಂದ್ಯ ಸೋತಾಕ್ಷಣ ಸರಣಿಯೇ ಮುಗಿದು ಹೋದಂತಲ್ಲ. ಇನ್ನೂ ಮೂರು ಪಂದ್ಯಗಳು ಬಾಕಿ ಇದ್ದು, ಮುಂದಿನ ಪಂದ್ಯಗಳಲ್ಲಿ ಆಸಿಸ್ ಗೆ ಭಾರತ ಕಠಿಣ ಸವಾಲಾಗಿರಲಿದೆ ಎನ್ನುತ್ತಾರೆ ಸಚಿನ್ ತೆಂಡೂಲ್ಕರ್.