ಕೋಲ್ಕತ್ತಾ: ಜಾರ್ಖಂಡ್ನ ವಿಜಯ ಹಜಾರೆ ತಂಡದ ಜತೆ ರೈಲಿನಲ್ಲಿ ಪ್ರಯಾಣ ಮಾಡಿ ಟೀಂ ಇಂಡಿಯಾದ ಅತ್ಯಂತ ಯಶಸ್ವೀ ನಾಯಕ ಎಂಬ ಹಿರಿಮೆಗೆ ಪಾತ್ರರಾಗಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸುದ್ಧಿ ಮಾಡಿದ್ದು, ಇದೀಗ ಕೋಲ್ಕತ್ತಾದಲ್ಲಿ ಸ್ಟಾರ್ ಹೋಟೆಲ್ ಅನ್ನು ತ್ಯಜಿಸಿ ಕ್ರಿಕೆಟ್ ಅಕಾಡೆಮಿಯಲ್ಲಿಯೇ ಉಳಿದುಕೊಳ್ಳುವ ಮೂಲಕ ಮತ್ತೆ ತಮ್ಮ ಸರಳತೆಗೆ ಸಾಕ್ಷಿಯಾಗಿದ್ದಾರೆ.
ಜಾರ್ಖಂಡ್ ತಂಡ ಮುಂದಿನೆರಡು ಪಂದ್ಯವನ್ನು ಕೋಲ್ಕತ್ತಾದಲ್ಲಿಯೇ ಆಡಲಿದ್ದು, ಫೆ.28ರಂದು ಸರ್ವಿಸಸ್ ವಿರುದ್ಧ ಮತ್ತು ಮಾ.6ರಂದು ಜಮ್ಮು ಕಾಶ್ಮೀರ ವಿರುದ್ಧ ಆಡಲಿದೆ. ಭದ್ರತಾ ಸಿಬ್ಬಂದಿಗೆ ಪರಿಸ್ಥಿತಿ ನಿಭಾಯಿಸುವುದು ಸ್ವಲ್ಪ ಕಷ್ಟವಾದರೂ, ಕೋಲ್ಕತಾ ಕ್ರಿಕೆಟ್ ಅಕಾಡೆಮಿಯಲ್ಲಿ ಉತ್ತಮ ವ್ಯವಸ್ಥೆಯಿರುವುದರಿಂದ ತೊಂದರೆಯಿಲ್ಲ ಎಂದು ವ್ಯವಸ್ಥಾಪಕರು ಹೇಳಿದ್ದಾರೆ.
ಧೋನಿ ನೇತೃತ್ವದ ಜಾರ್ಖಂಡ್ ತಂಡ ಸದ್ಯ ಕೋಲ್ಕತ್ತಾದಲ್ಲಿದ್ದು, ಧೋನಿ ಇಲ್ಲಿಯ ಕಲ್ಯಾಣಿಯಲ್ಲಿರುವ ಬಂಗಾಳ ಕ್ರಿಕೆಟ್ ಅಕಾಡೆಮಿಯಲ್ಲಿ ಉಳಿದುಕೊಂಡಿದ್ದಾರೆ.