ಮಡಿಕೇರಿ: ಮೆರಥಾನ್ ಮತ್ತು ಕ್ರಾಸ್ ಕಂಟ್ರಿ ಓಟದಲ್ಲಿ ಅಮೋಘ ಸಾಧನೆ ಮಾಡಿರುವ ನಿವೃತ್ತ ಕ್ಯಾಪ್ಟನ್ ಹೊಸೊಕ್ಲು ಚಿಣ್ಣಪ್ಪ ಅವರು ಮತ್ತೊಂದು ಸಾಧನೆಗೆ ಮುಂದಾಗಿದ್ದು, ಇದೇ ಅಕ್ಟೋಬರ್ ತಿಂಗಳಿನಲ್ಲಿ ಚೀನಾದಲ್ಲಿ ನಡೆಯಲಿರುವ ಏಷ್ಯನ್, ಮಾಸ್ಟರ್ಸ್ ಅಥ್ಲೆಟಿಕ್ಸ್ ಛಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಸೊಕ್ಲು ಚಿಣ್ಣಪ್ಪ ಅವರು, ತಮ್ಮ ಕ್ರೀಡಾ ಕ್ಷೇತ್ರದ ಸಾಧನೆಯ ಬಗ್ಗೆ ವಿವರಿಸಿದರು. 18ನೇ ವಯಸ್ಸಿನಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಯಾದ ಇವರು, 32 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಆಗಿ ನಿವೃತ್ತಿ ಹೊಂದಿದ್ದಾರೆ. ಸೇನೆಯಲ್ಲಿದ್ದಾಗ 42.195 ಕಿ. ಮೀ. ದೂರದ ಫುಲ್ ಮೆರಥಾನ್ ಹಾಗೂ 12 ಕಿ.ಮೀ. ದೂರದ ಕ್ರಾಸ್ ಕಂಟ್ರಿ ಓಟದ ಮೂಲಕ ಅಮೋಘ ಸಾಧನೆ ಮಾಡಿ ಪ್ರಶಸ್ತಿ ಗಳಿಸಿದ್ದಾರೆ.
ಕಮಾಂಡ್ ಕ್ರಾಸ್ ಕಂಟ್ರಿ ಮತ್ತು ಮೆರಥಾನ್ ಛಾಂಪಿಯನ್ ಶಿಪ್ ನಲ್ಲಿ 5 ಚಿನ್ನ, ಆರ್ಮ್ ಕ್ರಾಸ್ ಕಂಟ್ರಿ ಮತ್ತು ಮೆರಥಾನ್ ನಲ್ಲಿ 11 ಚಿನ್ನ ಹಾಗೂ 3 ಬೆಳ್ಳಿ, ಸರ್ವೀಸಸ್ ಕ್ರಾಸ್ ಕಂಟ್ರಿ ಮತ್ತು ಮೆರಥಾನ್ ನಲ್ಲಿ 7 ಚಿನ್ನ, 3 ಬೆಳ್ಳಿ, 2 ಕಂಚು, ನ್ಯಾಷನಲ್ ಕ್ರಾಸ್ ಕಂಟ್ರಿ ಮತ್ತು ಮೆರಥಾನ್ ನಲ್ಲಿ 10 ಚಿನ್ನ ಮತ್ತು 2 ಬೆಳ್ಳಿ, ನ್ಯಾಷನಲ್ ಇಂದಿರಾ ಮೆರಥಾನ್ ನಲ್ಲಿ 1 ಚಿನ್ನ, 2 ಬೆಳ್ಳಿ, 2 ಕಂಚು, ಉತ್ತರ ಪ್ರದೇಶದಲ್ಲಿ ನಡೆದ ನ್ಯಾಷನಲ್ ಅಂಬೇಡ್ಕರ್ ಮೆರಥಾನ್ ನಲ್ಲಿ 1 ಚಿನ್ನ, ಕೇರಳದ ನ್ಯಾಷನಲ್ ಓಣಂ ಮೆರಥಾನ್ ನಲ್ಲಿ 3 ಚಿನ್ನ, ಮೈಸೂರು ನ್ಯಾಷನಲ್ ದಸರಾ ಮೆರಥಾನ್ ನಲ್ಲಿ 1 ಚಿನ್ನ, ಮಂಗಳೂರು ನ್ಯಾಷನಲ್ ಮಂಗಳ ಮೆರಥಾನ್ ನಲ್ಲಿ 1 ಚಿನ್ನ, ಹರಿಯಾಣ ನ್ಯಾಷನಲ್ ನೋಯಿಡ ಮೆರಥಾನ್ ನಲ್ಲಿ 1 ಚಿನ್ನ, ಕೇರಳ ನ್ಯಾಷನಲ್ ಟ್ರೆವಂಕೂರ್ ಮೆರಥಾನ್ ನಲ್ಲಿ 2 ಚಿನ್ನ, 2 ಬೆಳ್ಳಿ , 1 ಕಂಚು ಹೀಗೆ ವಿವಿಧೆಡೆ ನಡೆದ ಮೆರಥಾನ್ ಮತ್ತು ಕ್ರಾಸ್ ಕಂಟ್ರಿಯಲ್ಲಿ ಒಟ್ಟು 48 ಚಿನ್ನ, 20 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಮಡಿಕೆೇರಿಯಿಂದ ಭಾಗಮಂಡಲದವರೆಗೆ ನಡೆಯುತ್ತಿದ್ದ ಕೊಡಗು ಕಾವೇರಿ ಮೆರಥಾನ್ ನಲ್ಲಿ 5 ಬಾರಿ ಛಾಂಪಿಯನ್ ಆಗಿರುವುದು ಹೊಸೊಕ್ಲು ಚಿಣ್ಣಪ್ಪ ಅವರ ಹೆಗ್ಗಳಿಕೆಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಸಾಧನೆ ಮಾಡಿದ್ದು, ರಷ್ಯಾ, ಫ್ರಾನ್ಸ್, ಗ್ರೀಸ್, ಲಿಸ್ಬನ್, ಸಿಂಗಾಪುರ , ಮಲೇಷಿಯಾ, ವಿಲ್ಮುರ, ಅಬುದಾಬಿ, ಹಾಂಕಾಂಗ್, ಬ್ಯಾಂಕಾಕ್ ಮತ್ತು ಬೈರೊಟ್ ನಲ್ಲಿ ಕ್ರೀಡಾ ಸಾಧನೆ ಮೆರೆದಿದ್ದಾರೆ.
ಸೇನೆಯಿಂದ ನಿವೃತ್ತಿಯಾದ ನಂತರ ಕೃಷಿಕನಾಗಿ ದುಡಿಯುತ್ತಿರುವುದಲ್ಲದೆ, ದೇಶ ವಿದೇಶಗಳಲ್ಲಿ ನಡೆಯುತ್ತಿರುವ ಮೆರಥಾನ್ ಮತ್ತು ಕ್ರಾಸ್ ಕಂಟ್ರಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಯುವ ಕ್ರೀಡಾ ಪಟುಗಳಿಗೆ ಸ್ಫೂರ್ಥಿಯಾಗಿರುವ ಹೊಸೊಕ್ಲು ಚಿಣ್ಣಪ್ಪ ಅವರು, ಅಕ್ಟೋಬರ್ ನಲ್ಲಿ ಚೀನಾದಲ್ಲಿ ನಡೆಯಲಿರುವ ಮಾಸ್ಟರ್ಸ್ ಅಥ್ಲೆಟಿಕ್ ಛಾಂಪಿಯನ್ ಶಿಪ್ ನಲ್ಲಿ 5 ಸಾವಿರ ಮತ್ತು 10 ಸಾವಿರ ಮೀ. ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿರುವ ಹೊಸೊಕ್ಲು ಚಿಣ್ಣಪ್ಪ ಅವರನ್ನು ಇಲ್ಲಿಯವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗುರುತಿಸಿಲ್ಲ. ಕೊಡಗಿನ ಕ್ರೀಡಾಸಕ್ತ ಯುವ ಸಮೂಹಕ್ಕೆ ಮೆರಥಾನ್ ಬಗ್ಗೆ ತರಬೇತಿ ನೀಡಲು ಚಿಣ್ಣಪ್ಪ ಅವರಿಗೆ ಇಚ್ಛೆ ಇದೆಯಾದರೂ ಜಿಲ್ಲೆಯಲ್ಲಿ ಅಥ್ಲೆಟಿಕ್ ಟ್ರ್ಯಾಕ್ ಗಳ ಕೊರತೆ ಎದುರಾಗಿದೆ ಮತ್ತು ಪೋಷಕರು ಮಕ್ಕಳನ್ನು ಪಠ್ಯ ಚಟುವಟಿಕೆಗಳಿಗಷ್ಟೆ ಸೀಮಿತಗೊಳಿಸುತ್ತಿರುವುದರಿಂದ ಕ್ರೀಡಾ ಕ್ಷೇತ್ರಕ್ಕೆ ಬರುವ ಮಕ್ಕಳ ಸಂಖ್ಯೆ ಕಡಿಮೆ ಎಂದು ಹೊಸೊಕ್ಲು ಚಿಣ್ಣಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.
ಇಚ್ಛೆಯುಳ್ಳವರು ತಮ್ಮನ್ನು ಸಂಪರ್ಕಿಸಿದಲ್ಲಿ ತರಬೇತಿ ನೀಡಲು ತಯಾರಿರುವುದಾಗಿ ಅವರು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.87623032234 ಸಂಪರ್ಕಿಸಬಹುದಾಗಿದೆ.
ಹೊಸೊಕ್ಲು ಕುಟುಂಬದ ಅಧ್ಯಕ್ಷರಾದ ಹೆಚ್.ಎಂ. ಸೋಮಯ್ಯ, ಪ್ರಮುಖರಾದ ಹೊಸೊಕ್ಲು ಮುತ್ತಪ್ಪ ಹಾಗೂ ಹೊಸೊಕ್ಲು ಗೋಪಾಲ ಅವರುಗಳು ಚೀನಾ ದೇಶದ ಮಾಸ್ಟರ್ಸ್ ಅಥ್ಲೆಟಿಕ್ಸ್ ಛಾಂಪಿಯನ್ ಶಿಪ್ ನಲ್ಲಿ ಚಿಣ್ಣಪ್ಪ ಅವರಿಗೆ ಯಶಸ್ಸು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.