ಮಡಿಕೇರಿ: ಪೆರಾಜೆಯ ಗೌಡ ಗ್ರಾಮ ಸಮಿತಿ ವತಿಯಿಂದ ಗೌಡ ಕಪ್ ಕ್ರಿಕೆಟ್ ಹಬ್ಬ ಮಾ.28 ರಿಂದ ಏಪ್ರಿಲ್ 5ರವರೆಗೆ ಪೆರಾಜೆಯಲ್ಲಿ ನಡೆಯಲಿದೆ. ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಕ್ರೀಡಾ ಸಮಿತಿಯ ಸಹ ಸಂಚಾಲಕ ಮನೋಜ್ ನಿಡ್ಯಮಲೆ ಪಂದ್ಯಾವಳಿ ಕುರಿತು ಮಾಹಿತಿ ನೀಡಿದರು. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗೌಡ ಕುಟುಂಬಗಳ ನಿಗದಿತ ಓವರ್ಗಳ ಓವರ್ ಆರ್ಮಿ ಕ್ರಿಕೆಟ್ ಪಂದ್ಯಾವಳಿಯನ್ನು 64 ಕುಟುಂಬ ತಂಡಗಳಿಗೆ ಸೀಮಿತಗೊಳಿಸಲಾಗಿದೆ.
ನಾಲ್ಕನೇ ವರ್ಷದ ಪಂದ್ಯಾವಳಿ ಇದಾಗಿದ್ದು, ಗೌಡ ಕುಟುಂಬಗಳ ಪರಸ್ಪರ ಪರಿಚಯ ಮತ್ತು ಸಾಮರಸ್ಯಕ್ಕಾಗಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಕಳೆದ ವರ್ಷ ಶ್ರೀ ಶಾಸ್ತಾವು ದೇವಸ್ಥಾನದ ನವೀಕರಣ ಹಿನ್ನೆಲೆಯಲ್ಲಿ ಪಂದ್ಯಾವಳಿಯನ್ನು ನಡೆಸಿರಲಿಲ್ಲ. ಈ ಬಾರಿ ಅದ್ಧೂರಿಯಾಗಿ ಕ್ರಿಕೆಟ್ ಹಬ್ಬವನ್ನು ನಡೆಸಲು ನಿರ್ಧರಿಸಲಾಗಿದ್ದು, ತಂಡಗಳ ನೋಂದಾವಣೆಗೆ ಮಾ.20 ಕೊನೆಯ ದಿನವಾಗಿದೆ. ಮಾ.23 ರಂದು ಟೈಸ್ ತೆಗೆಯಲಾಗುತ್ತದೆ ಎಂದರು.
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಜಾತ್ರೋತ್ಸವ ನಡೆಯುವುದರಿಂದ ಸೀಮಿತ ದಿನಗಳ ಒಳಗಾಗಿ ಪಂದ್ಯಾವಳಿ ಮುಗಿಸಬೇಕಾಗಿದೆ. ಆದ್ದರಿಂದ ಮೊದಲು ಹೆಸರು ನೋಂದಾಯಿಸಿಕೊಳ್ಳುವ 64 ಕುಟುಂಬಗಳಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಎರಡು ವರ್ಷಗಳ ಹಿಂದೆ 68 ತಂಡಗಳು ಪಾಲ್ಗೊಂಡಿದ್ದು, ಗೌಡ ಕುಟುಂಬಗಳಿಗೆ ಮಾತ್ರ ಈ ಕ್ರಿಕೆಟ್ ಹಬ್ಬ ಸೀಮಿತವಾಗಿದೆ. ನೋಂದಾವಣೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಮೈದಾನ ಶುಲ್ಕ 1500 ರೂ.ಗಳಾಗಿದ್ದು, ಆಟಗಾರರು ಸಮವಸ್ತ್ರದೊಂದಿಗೆ ಶಿಸ್ತನ್ನು ಪಾಲಿಸಬೇಕೆಂದು ಮನೋಜ್ ನಿಡ್ಯಮಲೆ ತಿಳಿಸಿದರು.
ವಿಜೇತ ತಂಡಗಳಿಗೆ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು. ತಂಡಗಳ ನಡುವೆ ಸಮಬಲ ಏರ್ಪಟ್ಟರೆ ಸೂಪರ್ ಬಾಲ್ ಮೂಲಕ ಗೆಲುವನ್ನು ನಿಶ್ಚಯಿಸಲಾಗುವುದು. ತಂಡಗಳು ನೋಂದಾಯಿಸಿಕೊಳ್ಳಬೇಕಾದ ಮೊಬೈಲ್ ಸಂಖ್ಯೆ-944555303, 9482849796, 9449893970.
ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಸಮಿತಿ ಅಧ್ಯಕ್ಷರಾದ ಕೆ.ಕೆ. ಪದ್ಮಯ್ಯ, ಸಂಚಾಲಕರಾದ ರಕ್ಷಿತ್ ಬಂಗಾರಕೋಡಿ, ಕಾರ್ಯದರ್ಶಿ ಪ್ರವೀಣ್ ಬಂಗಾರಕೊಡಿ ಹಾಗೂ ಸದಸ್ಯ ಕಿರಣ್ ಬಂಗಾರಕೋಡಿ ಉಪಸ್ಥಿತರಿದ್ದರು.