ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಭಾರತ ಸೋಲಿನ ಸುಳಿಗೆ ಸಿಲುಕಿದ್ದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಕೇವಲ 188 ರನ್ ಗಳ ಅಲ್ಪ ಗುರಿ ನೀಡಿದೆ.
ಭಾರತ 4 ವಿಕೆಟ್ ನಷ್ಟಕ್ಕೆ ನಿನ್ನೆ 213 ರನ್ ಗಳಿಸಿದ್ದು, 40 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ರಹಾನೆ ಇಂದು ಅರ್ಧಶತಕ ಸಿಡಿಸುತ್ತಿದ್ದಂತೆಯೇ ಸ್ಟ್ರಾಕ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದು ಔಟಾದರು. ಬಳಿಕ ಬಂದ ನಾಯರ್ ಶೂನ್ಯ, 79 ರನ್ ಗಳಿಸಿ ಅಜೇಯರಾಗಿದ್ದ ಪೂಜಾರ ಇಂದು ತಮ್ಮ ರನ್ ಗಳಿಕೆಯನ್ನು 92ಕ್ಕೆ ಏರಿಸಿಕೊಂಡು ಶತಕ ಭಾರಿಸುವ ಹಂತದಲ್ಲಿರುವಾಗಲೇ ಹೇಜಲ್ ವುಡ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ನಿರಾಸೆ ಮೂಡಿಸಿದರು.
ಅಶ್ವಿನ್ 4 ರನ್, ಯಾದವ್ 1 ರನ್, ಇಶಾಂತ್ ಶರ್ಮಾ 6 ರನ್ ಗಳಿಸಿ ತಮ್ಮ ತಮ್ಮ ವಿಕೆಟ್ ಒಪ್ಪಿಸುವ ಮೂಲಕ ಭಾರತ ತನ್ನೆಲ್ಲಾ ವಿಕೆಟ್ ಗಳನ್ನು 274 ರನ್ ಗಳಿಗೆ ಕಳೆದುಕೊಂಡು ಆಸ್ಟ್ರೇಲಿಯಾಗೆ ಗೆಲ್ಲಲು 188 ರನ್ ಗಳ ಅಲ್ಪ ಗುರಿಯನ್ನು ನೀಡಿದೆ.
ಆಸ್ಟ್ರೇಲಿಯಾ ಪರ ಹೇಜಲ್ ವುಡ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ, ಭಾರತದ ಪ್ರಮುಖ ವಿಕೆಟ್ ಕಬಳಿಸಿದರೆ, ಸ್ಟಾರ್ಕ್ ಮತ್ತು ಒಕೀಫ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.