ಹೊಸದಿಲ್ಲಿ: ಪಾಕ್ ತಂಡದ ಮಿಸ್ಬಾ ಉಲ್ ಹಕ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದರೂ ಟೀಂ ಇಂಡಿಯಾದ ಯುವರಾಜ್ ಸಿಂಗ್ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ.
ಹಾಂಗ್’ಕಾಂಗ್ ಟಿ20 ಬ್ಲಿಟ್ಜ್ ಟೂರ್ನಿಯಲ್ಲಿ ಹಾಂಗ್ ಕಾಂಗ್ ಐ ಲ್ಯಾಂಡ್ ಯುನೈಟೆಡ್ ತಂಡವನ್ನು ಪ್ರತಿನಿಧಿಸಿರುವ ಮಿಸ್ಬಾ, ಹಂಗ್ ಹೋಂ ಜಾಗ್ವಾರ್ ವಿರುದ್ಧದ ಪಂದ್ಯದಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.
ಮಿಸ್ಬಾ ಉಲ್ ಹಕ್ 6 ಎಸೆತಗಳಲ್ಲಿ ಸತತ 6 ಸಿಕ್ಸರ್ ಸಿಡಿಸಿದ್ದಾರೆಯಾದರೂ ಅದು ಒಂದು ಓವರ್ ನಲ್ಲಿ ಅಲ್ಲ. ಬದಲಿಗೆ 2 ಓವರ್ ಗಳಲ್ಲಿ. 19ನೇ ಓವರ್ ನ ಅಂತಿಮ ಎರಡು ಎಸೆತಗಳಲ್ಲಿ ಮತ್ತು 20ನೇ ಓವರ್ ನ ಮೊದಲ ನಾಲ್ಕು ಎಸೆತಗಳಲ್ಲಿ ಮಿಸ್ಬಾ ಉಲ್ ಹಕ್ ಸತತ ಆರು ಸಿಕ್ಸರ್ ಸಿಡಿಸಿದರು. ಹೀಗಾಗಿ ಯುವರಾಜ್ ಸಿಂಗ್ ಹೆಸರಲ್ಲಿರುವ ಈ ದಾಖಲೆಯನ್ನು ಮುರಿಯುವಲ್ಲಿ ಮಿಸ್ಬಾ ವಿಫಲರಾಗಿದ್ದಾರೆ.
ಈ ಪಂದ್ಯದಲ್ಲಿ ಹಾಂಗ್ ಕಾಂಗ್ ಐ ಲ್ಯಾಂಡ್ ಯುನೈಟೆಡ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿತು ಮಿಸ್ಬಾ (82 ರನ್ ಗಳು). ಇದಕ್ಕೆ ಪ್ರತ್ಯುತ್ತರವಾಗಿ ಹಂಗ್ ಹೋಂ ಜಾಗ್ವಾರ್ ತಂಡ 8 ವಿಕೆಟ್ ಕಳೆದುಕೊಂಡು 183 ರನ್ ಗಳಿಸಲಷ್ಟೇ ಸಾಧ್ಯವಾಯಿತು.
2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಓವರ್ ನಲ್ಲಿ 6 ಎಸೆತದಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು.
ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಮಿಸ್ಬಾ-ಉಲ್-ಹಕ್ ಕ್ರಿಕೆಟ್ ವೃತ್ತಿಜೀವನದ ಅಂತಿಮ ಘಟ್ಟದಲ್ಲಿದ್ದು, ತನ್ನಲ್ಲಿ ಇನ್ನೂ ಸ್ಫೋಟಕ ಬ್ಯಾಟಿಂಗ್ ನಡೆಸುವ ಶಕ್ತಿಯಿದೆ ಎಂಬುದನ್ನು ಈ ಮೂಲಕ ತೋರಿಸಿದ್ದಾರೆ.