ಹೊಸದಿಲ್ಲಿ: ಏ.14ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಲಭುಜದ ಗಾಯದಿಂದ ಚೇತರಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಆಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದು, ‘ಕ್ರೀಡಾಂಗಣಕ್ಕೆ ಇಳಿಯುವುದನ್ನು ಇನ್ನು ಕಾಯಲಾರೆ.??? ಏಪ್ರಿಲ್ 14 ರಂದು ಬಹುತೇಕ ನಾನು ಅಲ್ಲಿರುತ್ತೇನೆ’ ಎಂದು ಹೇಳಿದ್ದಾರೆ.
ಅವರ ಟ್ವಿಟರ್ ಸಂದೇಶದಲ್ಲಿ, ಪ್ರಶ್ನಾರ್ಥಕ ಚಿಹ್ನೆಗಳಿಂದಾಗಿ ಅವರು ತಂಡಕ್ಕೆ ಮರಳುವುದು ಶೇಕಡ100ರಷ್ಟು ಖಚಿತವಲ್ಲ ಎಂಬ ಸಂಶಯವನ್ನೂ ಹುಟ್ಟುಹಾಕಿವೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರು ಜಿಮ್ನಾಷಿಯಂನಲ್ಲಿ ವೇಟ್‌ಲಿಫ್ಟಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋ ಕೂಡ ಹಾಕಿದ್ದು, ಅದರಲ್ಲಿ ಸಲೀಸಾಗಿ ತೂಕ ಎತ್ತಿ ಇಳಿಸುತ್ತಿರುವ ದೃಶ್ಯವಿದೆ.
ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ, ಹೋದ ತಿಂಗಳು ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಗಾಯಗೊಂಡಿದ್ದು, ನಂತರ ಧರ್ಮಶಾಲಾದಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಐಪಿಎಲ್ ಟೂರ್ನಿ ಏಪ್ರಿಲ್ 5ರಂದು ಆರಂಭವಾಗಿದ್ದು, ಮೂರು ಪಂದ್ಯಗಳಲ್ಲಿಯೂ ಅವರು ವಿಶ್ರಾಂತಿ ಪಡೆದಿದ್ದರು.