ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಕೊಡಗು ಗೌಡ ಕುಟುಂಬಗಳ ನಡುವೆ ಪೈಕೇರ ಕುಟುಂಬಸ್ಥರ ಆತಿಥ್ಯದಲ್ಲಿ ಏ.21 ರಿಂದ ಮೇ 7ರವರೆಗೆ ನಡೆಯುವ ಪೈಕೇರ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ 210 ಕುಟುಂಬ ತಂಡಗಳು ಭಾಗವಹಿಸುತ್ತಿವೆ.
ಸುದ್ದಿಗೋಷ್ಠಿಯಲ್ಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡಗು ಗೌಡ ಯುವ ವೇದಿಕೆಯ ಪ್ರಚಾರ ಸಮಿತಿ ಅಧ್ಯಕ್ಷರಾದ ಕುಡೆಕಲ್ ಸಂತೋಷ್ ಅವರು, ಕಳೆದ ಬಾರಿ ನಡೆದ ಕುಟ್ಟನ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 180 ತಂಡಗಳು ಭಾಗವಹಿಸಿದ್ದರೆ, ಈ ಬಾರಿ ಅತ್ಯಲ್ಪ ಸಮಯದಲ್ಲಿ 210 ಕುಟುಂಬ ತಂಡಗಳು ನೋಂದಣಿ ಮಾಡಿಕೊಂಡಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ಪಂದ್ಯಾವಳಿಗಾಗಿ ಕೊಡಗು ಗೌಡ ಯುವ ವೇದಿಕೆ ಹಾಗೂ ಪೈಕೇರ ಕುಟುಂಬಸ್ಥರು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಗೆ ಏ.21ರ ಪೂರ್ವಾಹ್ನ 11 ಗಂಟೆಗೆ ಆದಿಚುಂಚನಗಿರಿ ಹಾಸನ-ಕೊಡಗು ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಕ್ರೀಡಾಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮವನ್ನು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಲಿದ್ದು, ಕ್ರೀಡಾಕೂಟವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಇವರೊಂದಿಗೆ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾಅಚ್ಚಯ್ಯ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕುಡೆಕಲ್ ಸಂತೋಷ್ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಅಂದು ಬೆಳಗ್ಗೆ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಕ್ರೀಡಾಜ್ಯೋತಿ ಬೆಳಗಿ ಬಳಿಕ ಗುಡ್ಡೆಮನೆ ಅಪ್ಪಯ್ಯ ಗೌಡ ಪ್ರತಿಮೆ ಬಳಿಯಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಜನಾಂಗದ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ತರಲಿದ್ದಾರೆ ಎಂದು ಹೇಳಿದರು.
ಹೊನಲು ಬೆಳಕಿನ ಕಬಡ್ಡಿ ಆಕರ್ಷಣೆ:
ಕಳೆದ ಬಾರಿಯಂತೆ ಈ ಬಾರಿಯೂ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ನಡೆಸಲಾಗುತ್ತಿದ್ದು, ಈ ಬಾರಿಯ ವಿಶೇಷವೆಂಬಂತೆ ಮಹಿಳೆಯರಿಗೂ ಕಬಡ್ಡಿ ಪಂದ್ಯವನ್ನು ಆಯೋಜಿಸಲಾಗಿದೆ. ಈಗಾಗಲೇ 32 ಪುರುಷ ಹಾಗೂ 8 ಮಹಿಳಾ ತಂಡಗಳು ಹೆಸರು ನೋಂದಾಯಿಸಿಕೊಂಡಿವೆ.
ಏ.30ರಂದು ನಡೆಯುವ ಕಬಡ್ಡಿ ಪಂದ್ಯಾಟದ ಜೊತೆಗೆ ಥ್ರೋಬಾಲ್ ಪಂದ್ಯವನ್ನೂ ನಡೆಸಲಾಗುವುದು. ಏ.22ರಂದು ರಕ್ತದಾನ ಶಿಬಿರ, 29ರಂದು ಉಚಿತ ನೇತ್ರ ತಪಾಸಣಾ ಹಾಗೂ ಮಧುಮೇಹ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ಮೈದಾನಗಳನ್ನು ಪಂದ್ಯಾವಳಿಗಾಗಿ ಸಜ್ಜುಗೊಳಿಸಲಾಗಿದ್ದು, ಮೇ 4 ರವರೆಗೆ ಎಲ್ಲಾ ತಂಡಗಳ ನಾಲ್ಕು ಸುತ್ತಿನ ಪಂದ್ಯಾಟ ನಡೆಯಲಿದೆ. ಮೇ 5ರಂದು ಪ್ರೀ ಕ್ವಾರ್ಟರ್ ಪಂದ್ಯ ಹಾಗೂ ಎರಡು ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದ್ದು, ಮೇ 6 ರಂದು ಎರಡು ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯ ಹಾಗೂ ಮೇ 7ರಂದು ಬೆಳಗ್ಗೆ 10.30ಕ್ಕೆ ಫೈನಲ್ ಪಂದ್ಯವನ್ನು ನಡೆಸಲಾಗುವುದು. ಮಧ್ಯಾಹ್ನದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ಮತ್ತು ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಕುಡೆಕಲ್ ಸಂತೋಷ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಪ್ರಧಾನ ಕಾರ್ಯದರ್ಶಿ ರಿಷಿತ್ ಮಾದಯ್ಯ ಹಾಗೂ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಹಾಜರಿದ್ದರು.