ಮಡಿಕೇರಿ: ಒಂದು ಸಮಾಜದ ಎಲ್ಲಾ ಜನರು ಒಟ್ಟಿಗೆ ಸೇರಿಸುವ ಕೆಲಸವನ್ನು ಕ್ರೀಡಾಕೂಟಗಳು ಮಾಡುತ್ತವೆ. ಎಲ್ಲರೂ ಒಂದು ಎಂಬ ಭಾವನೆ ಕ್ರೀಡೆಯಿಂದ ಸಾಧ್ಯ. ಎಲ್ಲರ ಮನಸ್ಸುಗಳನ್ನು ಒಂದು ಮಾಡುವ ಶಕ್ತಿ ಕ್ರೀಡೆಗೆ ಇದೆ ಎಂದು ಕೇಂದ್ರ ಸಾಂಖ್ಯಿಕ ಯೋಜನಾ ಖಾತೆ ಮಂತ್ರಿ ಡಿ.ವಿ.ಸದಾನಂದಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಗೌಡ ಯುವ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪೈಕೇರ ಕ್ರಿಕೆಟ್ ಕಪ್ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ರಾಜ್ಯದಲ್ಲಿ ವಿಶಿಷ್ಟ ಜಿಲ್ಲೆ. ದೇಶದ ಸೇನೆಗೆ, ಕ್ರೀಡೆಗೆ ಅಪಾರ ಕೊಡುಗೆ ನೀಡಿದೆ ಎಂದು ತಿಳಿಸುತ್ತಾ ಜಿಲ್ಲೆಯು ಪ್ರವಾಸಿಗರನ್ನು ಆಕಷರ್ಿಸುವ ತಾಣ, ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ, ಶಿಸ್ತು, ಸಕರಾತ್ಮಕ ಭಾವನೆಗಳಿಂದ ಕೂಡಿದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ ಕೊಡಗು ಜಿಲ್ಲೆ ಉತ್ತಮ ಪ್ರಾಕೃತಿಕ ಸಂಪತ್ತನ್ನು ಹೊಂದಿದೆ. ಕಾವೇರಿ ಮಾತೆಯ ಉಗಮ ಸ್ಥಾನ. ಬೆಂಗಳೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ನೀರು ನೀಡುತ್ತಿರುವ ಜಿಲ್ಲೆ. ಜಿಲ್ಲೆಯು ದೊಡ್ಡ ಮಟ್ಟದಲ್ಲಿ ಸೇನೆ, ಕ್ರೀಡೆಯಲ್ಲಿ ಹೆಸರು ಗಳಿಸಿದೆ. ಕ್ರೀಡೆಯು ಸಮಾಜದಲ್ಲಿ ಇರುವ ವಿಶ್ವಾಸ ಕೊರತೆಯನ್ನು ದೂರಮಾಡಿ ಭಾವೈಕ್ಯತೆಯನ್ನು ಸಮಾಜದಲ್ಲಿ ಮೂಡುವಂತೆ ಮಾಡುತ್ತದೆ ಎಂದು ಅವರು ತಿಳಿಸಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ 17 ವರ್ಷದಿಂದ ನಿರಂತರವಾಗಿ ಈ ಕ್ರೀಡಾಕೂಟ ನಡೆದುಕೊಂಡು ಬರುತ್ತಿದೆ. ಸಮಾಜದವರ ಒಗ್ಗಟ್ಟಿನ ಪ್ರದರ್ಶನ ಇತರೆ ಸಮಾಜದವರಿಗೂ ಸ್ಫೂರ್ತಿಯಾಗಿ ಇರುತ್ತದೆ ಎಂದು ಅವರು ಹೇಳಿದರು. ಶಾಸಕರಾದ ಅಪ್ಪಚ್ಚುರಂಜನ್ ಅವರು ಮಾತನಾಡಿ ಕೊಡಗು ಜಿಲ್ಲೆಯಿಂದ ಮುಂಬರುವ ದಿನಗಳಲ್ಲಿ ಭಾರತದ ಹಾಕಿ ಮತ್ತು ಕ್ರಿಕೆಟ್ ತಂಡಗಳಲ್ಲಿ ಇಲ್ಲಿನ ಕ್ರೀಡಾಪಟುಗಳು ಸ್ಥಾನ ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಅವರು ಕೊಡಗಿನಿಂದ ಸುಮಾರು 50 ಜನರು ದೇಶದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುತ್ತಾರೆ. ಇಲ್ಲಿನ ಜನರ ರಕ್ತದಲ್ಲಿಯೇ ಕ್ರೀಡೆಯು ಬೆರೆತಿದೆ. ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಇರಬೇಕು. ಉತ್ತಮ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿ ಕ್ರೀಡೆಯು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ಕ್ರೀಡೆಗೆ ಪ್ರೋತ್ಸಾಹವನ್ನು ನೀಡಿ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ಮಾಡಬೇಕು ಎಂದು ಅವರು ಹೇಳಿದರು. ಸಭೆಯ ಕೊನೆಯಲ್ಲಿ ಶ್ರೀ ಆದಿಚುಂಚನಗಿರಿ ಮಠದ ಕೊಡಗು-ಹಾಸನ ಜಿಲ್ಲೆಯ ಶ್ರೀ ಶಂಭುನಾಥ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಮಾಜಿ ಸಚಿವರಾದ ಜೀವಿಜಯ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಕೊಡಗು ಗೌಡ ಯುವ ವೇದಿಕೆಯ ಪೈಕೇರ ಮನೋಹರ್ ಮಾದಪ್ಪ, ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಹೊಸೂರು ರಮೇಶ್ ಜೋಯಪ್ಪ ಇತರರು ಇದ್ದರು. ಕಟ್ಟೆಮನೆ ಸೋನು ಅವರು ವಂದಿಸಿದರು.