ಮಡಿಕೇರಿ: ಹಾಕಿ, ಕ್ರಿಕೆಟ್ ಮಾತ್ರವಲ್ಲ ಮೋಟಾರ್ ರಾಲಿಯಲ್ಲೂ ಮುಂಚೂಣಿಯಲ್ಲಿದ್ದಾರೆ ಎಂಬುದನ್ನು ಕೊಡಗಿನ ರಾಲಿಪಟುಗಳಾದ ಕೊಂಗೇಟಿರ ಬೋಪಯ್ಯ ಮತ್ತು ಕೊಂಗಂಡ ಕರುಂಬಯ್ಯ ಸಾಬೀತು ಮಾಡಿದ್ದಾರೆ.
ಅರುಣಾಚಲ್ ಫೆಸ್ಟಿವಲ್ ಆಫ್ ಸ್ಪೀಡ್ 2017ರಾಲಿಯಲ್ಲಿ ಇವರಿಬ್ಬರು ಗೆಲುವು ಸಾಧಿಸುವುದರ ಮೂಲಕ ಕೊಡಗಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದ್ದಾರೆ.
ಚೆಟ್ಟಳ್ಳಿಯ ಕೊಂಗೇಟಿರ ಬೋಪಯ್ಯ(ಡ್ರೈವರ್)ಹಾಗೂ ಕೊಂಗಂಡ ಗಗನ್ ಕರುಂಬಯ್ಯ(ನ್ಯಾವಿಗೇಟರ್) ಅರುಣಾಚಲ್ ಫೆಸ್ಟಿವಲ್ ಆಫ್ ಸ್ಪೀಡ್2017ರಾಲಿಯಲ್ಲಿ ಭಾಗವಹಿಸಿ 1600 ಸಿಸಿಯಲ್ಲಿ ಮೊದಲ ಹಾಗೂ ಓವರಾಲ್ ನಲ್ಲಿ ಎರಡನೇ ಬಹುಮಾನವನ್ನು ಪಡೆದಿದ್ದಾರೆ.
ಅರುಣಾಚಲ್ ಫೆಸ್ಟಿವಲ್ ಆಫ್ ಸ್ಪೀಡ್ 2017ರಾಲಿಯನ್ನು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಅರುಣಾಚಲ್ ಪ್ರದೇಶ್ ಹಾಗೂ ಸರಕಾರದ ಪ್ರಾಯೋಜಕತ್ವದಲ್ಲಿ ನಡೆದ ನಾಲ್ಕನೇ ವರ್ಷದ ರಾಲಿಯಲ್ಲಿ ಭಾರತದ 20 ನುರಿತ ರಾಲಿಪಟುಗಳು ಭಾಗವಹಿಸಿದ್ದು, ಒಟ್ಟು 9 ಹಂತಗಳಿದ್ದು 80 ಕಿ.ಮೀ. ದೂರದ ಮೂರುದಿನಗಳ ರಾಲಿ ಇದಾಗಿತ್ತು. ಬೆಟ್ಟಗುಡ್ಡಗಳು, ಪ್ರಪಾತಗಳ ನಡುವೆ ಕಿರಿದಾದ ಪ್ರದೇಶದಲ್ಲಿ ರಾಲಿಯನ್ನು ಆಯೋಜಿಸಲಾಗಿತ್ತು.
ಕೊಂಗೇಟಿರ ಬೋಪಯ್ಯ ಹಾಗೂ ಕೊಂಗಂಡ ಕರುಂಬಯ್ಯನವರು ಇಂಡಿಯನ್ ನ್ಯಾಷನಲ್ ರಾಲಿ ಚಾಂಪಿಯನ್ಶಿಪ್ ಆಫ್ ರೋಡ್ ಮತ್ತು ಆಟೋಕ್ರಾಸ್ ಗಳಂತಹ ಹಲವು ರಾಲಿಗಳಲ್ಲಿ ಭಾಗವಹಿಸಿದ ಅನುಭವ ಹಾಗೂ ಗೆಲುವು ಸಾಧಿಸಿದ ಅನುಭವ ಇದ್ದಿದರಿಂದ ಅರುಣಾಚಲ ಪ್ರದೇಶದಲ್ಲಿ ನಡೆದ ಕಠಿಣ ರಾಲಿಯಲ್ಲಿ ಭಾಗವಹಿಸಿ ಟ್ರೋಫಿ ಹಾಗೂ ಒಂದು ಲಕ್ಷ ಬಹುಮಾನವನ್ನು ಪಡೆದಿದ್ದಾರೆ.
ಇತರೆ ರಾಲಿಗಳಲ್ಲಿ ಭಾಗವಹಿಸಿದ ಅನುಭವವಿದ್ದರೂ ಈ ರಾಲಿ ರೋಚಕ ಅನುಭವ ನೀಡಿತು ಎಂಬುದಾಗಿ ರಾಲಿಪಟುಗಳು ಹೇಳಿದ್ದಾರೆ.