ಮಡಿಕೇರಿ: ಕೊಡಗಿನ ಕೃಷಿ ಸಂಸ್ಕೃತಿಯ ಭಾಗವಾಗಿರುವ ಅತ್ಯಂತ ವಿಶಿಷ್ಟವಾದ ಗ್ರಾಮೀಣ ಕ್ರೀಡೆಗಳನ್ನು ಸಂರಕ್ಷಿಸಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮೇ 22 ರಿಂದ 26 ರವರೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ‘ಕೊಡಗು ಜಿಲ್ಲಾ ಗ್ರಾಮೀಣ ಕ್ರೀಡಾಕೂಟ’ವನ್ನು ಆಯೋಜಿಸಿರುವುದಾಗಿ ಆದಿಪರಾಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ನಾಪಂಡ ಪೂವಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ನಡೆಯುವ ಗ್ರಾಮಿಣ ಕ್ರೀಡಾ ಕೂಟವನ್ನು ಜಾತಿ ಮತಗಳ ಭೇದವಿಲ್ಲದೆ ಇದೀಗ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಕ್ರ್ರೀಡಾಕೂಟದ ಯಶಸ್ಸಿಗೆ ಪ್ರತ್ಯೇಕ ಸಮಿತಿಯನ್ನು ರಚಿಸಿಕೊಳ್ಳಲಾಗಿದ್ದು, ಭರದ ಸಿದ್ಧತೆ ಅಂತಿಮ ಹಂತದಲ್ಲಿರುವುದಾಗಿ ಮಾಹಿತಿ ನೀಡಿದರು.
ಆದಿಪರಾಶಕ್ತಿ ಸೇವಾ ಟ್ರಸ್ಟ್ ಟ್ರಸ್ಟಿ ನಿಶಾ ಪೂವಯ್ಯ ಮಾತನಾಡಿ, ಟ್ರಸ್ಟ್ ಮೂಲಕ ಮರೆತು ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳ ಪುನಶ್ಚೇತನಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು. ಟ್ರಸ್ಟ್ ಮೂಲಕ ಕ್ರೀಡಾ ಚಟುವಟಿಕೆಗಳ ಜೊತೆಯಲ್ಲೇ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಕ್ರೀಡಾಕೂಟದ ಉದ್ಘಾಟನಾ ದಿನವಾದ ಮೇ 22 ರಂದು ‘ರಕ್ತದಾನ ಶಿಬಿರ’ವನ್ನು ಕೂಡ ಆಯೋಜಿಸಲಾಗಿದೆ ಎಂದರು.
ಟ್ರಸ್ಟ್ ಸಲಹೆಗಾರರಾದ ಹರೀಶ್ ಸರಳಾಯ ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದರು. ಗ್ರಾಮೀಣ ಕ್ರೀಡಾಕೂಟದಲ್ಲಿ ಎಲ್ಲಾ ವಯೋಮಿತಿಯವರಿಗೆ ಸಂಬಂಧಿಸಿದಂತೆ ಬಾಲಕ-ಬಾಲಕಿ, ಮಹಿಳೆಯರು-ಪುರುಷರ ವಿಭಾಗದಲ್ಲಿ ಸ್ಪಧರ್ೆಗಳನ್ನು ಆಯೋಜಿಸಲಾಗುತ್ತದೆ ಮತ್ತು ನಗದು ಬಹುಮಾನವನ್ನು ನೀಡಲಾಗುತ್ತದೆ. ಗ್ರಾಮೀಣ ವಿಭಾಗದ ಕ್ರೀಡಾಸಕ್ತರು ವಯಸ್ಸಿನ ಮಿತಿಯಿಲ್ಲದೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬಹುದೆಂದು ತಿಳಿಸಿದರು.
ಐದು ದಿನಗಳ ಕಾಲ ನಡೆಯುವ ಗ್ರಾಮೀಣ ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ತೆಂಗಿನ ಕಾಯಿಗೆ ಗುಂಡು ಹಾಗೂ ಕಲ್ಲು ಹೊಡೆಯುವ ಸ್ಪರ್ಧೆಗಳು, ಕೃಷಿ ಚಟುವಟಿಕೆಗಳನ್ನು ಮೆಲುಕು ಹಾಕುವಂತಹ ಮೂಟೆ ಹೊತ್ತು ಓಡುವ ಸ್ಪರ್ಧೆ, ಮೂರು ಕಾಲು ಓಟ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿರುವುದಾಗಿ ಮಾಹಿತಿ ನೀಡಿದರು.
ಹಗ್ಗಜಗ್ಗಾಟ ಮತ್ತು ತೆಂಗಿನ ಕಾಯಿ ಎಳೆಯುವ ಸ್ಪರ್ಧೆಗಳಿಗೆ ಮೇ 10ರ ಒಳಗಾಗಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಮೊ.7026269344ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಲೋಗೋ ಬಿಡುಗಡೆ:
ಗ್ರಾಮಿಣ ಕ್ರೀಡಾಕೂಟದ ಲೋಗೋವನ್ನು ಇದೇ ಸಂದರ್ಭ ಆದಿಪರಾಶಕ್ತಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಅನಾವರಣಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕಾವೇರಪ್ಪ ಹಾಗೂ ಪೊನ್ನಚೆಟ್ಟೀರ ರಾಜೇಶ್ ಉಪಸ್ಥಿತರಿದ್ದರು. ಫೋಟೋ :: ವಿಲೇಜ್ ಸ್ಪೋಟ್ಸರ್್