ಮುಂಬೈ: ಐಸಿಸಿಯ ಹೊಸ ಆದಾಯ ಹಂಚಿಕೆ ನಿಯಮಕ್ಕೆ ಕೊನೆಗೂ ಬಿಸಿಸಿಐ ಒಪ್ಪಿಗೆ ಸೂಚಿಸಿದೆ. ನೂತನ ಆದಾಯ ಹಂಚಿಕೆ ಮಾದರಿ ಪ್ರಕಾರ ಬಿಸಿಸಿಐ ಒಟ್ಟು 405 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಪಡೆದುಕೊಳ್ಳಲಿದೆ. ಲಂಡನ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಐಸಿಸಿ ಈ ನಿರ್ಣಯ ಕೈಗೊಂಡಿತು.
ಇದಕ್ಕೂ ಮುಂಚೆ ದುಬೈನಲ್ಲಿ ನಡೆದಿದ್ದ ಐಸಿಸಿ ಸಭೆಯಲ್ಲಿ ಹೊಸ ಆದಾಯ ಹಂಚಿಕೆ ಅನುಸಾರ ಬಿಸಿಸಿಐಗೆ 2016 ರಿಂದ 2023ರ ವರೆಗೆ 293 ಮಿಲಿಯನ್ ಡಾಲರ್ ಹಣವನ್ನು ನೀಡುವುದಾಗಿ ತಿಳಿಸಿತ್ತು. ಆದರೆ ಬಿಗ್ ತ್ರಿ ಫಾರ್ಮುಲಾ ಅಡಿಯಲ್ಲಿ 570 ಮಿಲಿಯನ್ ಡಾಲರ್ ಹಣವನ್ನು ನೀಡವಂತೆ ಬಿಸಿಸಿಐ ಪಟ್ಟು ಹಿಡಿದಿತ್ತು.
ಬಿಸಿಸಿಐಯ ಈ ಬೇಡಿಕೆಯನ್ನು ಐಸಿಸಿ ನಿರಾಕರಿಸಿತ್ತು. ಆದರೆ ಈಗ ನೀಡುತ್ತಿರುವ ಹಣದೊಂದಿಗೆ ಹೆಚ್ಚುವರಿಯಾಗಿ 100 ಮಿಲಿಯನ್ ಡಾಲರ್ ನೀಡುವುದಾಗಿ ಐಸಿಸಿಯ ಸ್ವತಂತ್ರ ಚೇರಮನ್ ಶಶಾಂಕ್ ಮನೋಹರ್ ಬಿಸಿಸಿಐಗೆ ತಿಳಿಸಿದ್ದರು. ಅದರಂತೆ ಬಿಸಿಸಿಐಗೆ ಇದೀಗ 100 ಮಿಲಿಯನ್ ಡಾಲರ್ ಹೆಚ್ಚುವರಿಯಾಗಿ ಸೇರಿದೆ.
ನೂತನ ಆದಾಯ ಹಂಚಿಕೆ ಪ್ರಕಾರ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 143 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಪಡೆದುಕೊಂಡಿದೆ. ಜಿಂಬಾಬ್ವೆ ಕ್ರಿಕೆಟ್ಗೆ 94 ಮಿಲಿಯನ್ ಡಾಲರ್ ಮೊತ್ತ ನೀಡಿದ್ದು, ಇನ್ನುಳಿದ ಏಳು ಪೂರ್ಣ ಪ್ರಮಾಣದ ಸದಸ್ಯತ್ವ ಪಡೆದಿರುವ ಕ್ರಿಕೆಟ್ ರಾಷ್ಟ್ರಗಳು 132 ಮಿಲಿಯನ್ ಡಾಲರ್ ಹಣವನ್ನು ಪಡೆದುಕೊಂಡಿವೆ.