ಮಡಿಕೇರಿ: ಕೊಡಗಿನ ಮಳೆಯಲ್ಲಿ ನೆನೆಯುತ್ತಾ ಕೆಸರುಗದ್ದೆಯಲ್ಲಿ ಮಿಂದೇಳುತ್ತಾ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂಬ ಬಯಕೆ ಇದೆಯೇ? ಹಾಗಿದ್ದರೆ ತಪ್ಪದೆ ಈಗಲೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿಯ ನೆಹರು ಯುವ ಕೇಂದ್ರ, ಯೂತ್ ಹಾಸ್ಟೇಲ್ ಅಸೋಸಿಯೇಶನ್ ಆಫ್ ಇಂಡಿಯಾ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಆ.11 ರಂದು ಕಗ್ಗೋಡ್ಲು ಗ್ರಾಮದ ದಿ. ಸಿ.ಡಿ. ಬೋಪಯ್ಯನವರ ಗದ್ದೆಯಲ್ಲಿ ರಾಜ್ಯಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಈಗಿನಿಂದಲೇ ಕ್ರೀಡಾಪಟುಗಳ ನೋಂದಣಿ ಕಾರ್ಯ ಆರಂಭವಾಗಿದೆ.
ಈ ಕುರಿತು ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ನವೀನ್ ದೇರಳ ಅವರು ಮಾಹಿತಿ ನೀಡಿದ್ದು ಈ ಬಾರಿ 27 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ನಡೆಯುತ್ತಿದ್ದು, ಕ್ರೀಡಾ ಕೂಟದಲ್ಲಿ ಪುರುಷ ವಿಭಾಗಕ್ಕೆ ವಾಲಿಬಾಲ್, ಮಹಿಳೆಯರ ವಿಭಾಗಕ್ಕೆ ಥ್ರೋಬಾಲ್ ಹಾಗೂ ಪ್ರೌಢಶಾಲಾ ಬಾಲಕ, ಬಾಲಕಿಯರಿಗೆ ಹಗ್ಗಜಗ್ಗಾಟ ಸ್ಪರ್ಧೆಯನ್ನು ನಡೆಸಲಾಗುವುದು. ಕಿರಿಯ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ 50ಮೀ ಓಟ, ಹಿರಿಯ ಪ್ರಾಥಮಿಕ ಶಾಲಾ ಬಾಲಕರಿಗೆ 100 ಮೀ. ಓಟ ಪ್ರೌಢ ಶಾಲಾ ಬಾಲಕರಿಗೆ 200 ಮೀ. ಓಟ ಹಾಗೂ ಪದವಿ ಪೂರ್ವ ಕಾಲೇಜು ಬಾಲಕ, ಬಾಲಕಿಯರಿಗೆ 300 ಮೀ ಓಟದ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕ ಪುರುಷರು ಮತ್ತು ಮಹಿಳೆಯರಿಗೆ ಮುಕ್ತ ಓಟ ಹಾಗೂ ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟದ ಸ್ಪರ್ಧೆಯನ್ನು ಏರ್ಪಡಿಸಿರುವುದಾಗಿ ಅವರು ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಆಕರ್ಷ ಪಾರಿತೋಷಕ ಮತ್ತು ನಗದು ಬಹುಮಾನಗಳನ್ನು ನೀಡಲಾಗುವುದು. ಪ್ರೌಢಶಾಲಾ ವಿಭಾಗದ ಹಗ್ಗ ಜಗ್ಗಾಟದಲ್ಲಿ ಭಾಗವಹಿಸುವವರು ತಮ್ಮ ವಿದ್ಯಾ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರವನ್ನು ತರುವುದು ಅಗತ್ಯವಾಗಿದೆ. ಕ್ರೀಡಾಕೂಟ ಮತ್ತು ಆಟೋಟ ಸ್ಪಧರ್ೆಗಳು ಆ.11 ರಂದು ಬೆಳಗ್ಗೆ 9 ಗಂಟೆಯಿಂದ ಆರಂಭಗೊಳ್ಳಲಿದ್ದು ಹೆಚ್ಚಿನ ಮಾಹಿತಿಗೆ 9449952008, 9740404520, 9483835674 ಸಂಪರ್ಕಿಸುವಂತೆ ತಿಳಿಸಲಾಗಿದೆ.