ನವದೆಹಲಿ: ಪುಲ್ವಾಮಾ ದಾಳಿಯಿಂದಾಗಿ ಮುಂದಿನ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಆಡದೆ ಇರುವುದರ ಬದಲು, ಆಡಿ ಗೆಲ್ಲಬೇಕು ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಆಡದೆ ಇದ್ದರೆ ಆಗ ಭಾರತಕ್ಕೆ ನಷ್ಟವಾಗುತ್ತದೆ. ಯಾಕೆಂದರೆ ಪಾಕ್ ಗೆ ಎರಡು ಅಂಕ ಬಿಟ್ಟುಕೊಟ್ಟಂತೆ ಆಗುತ್ತದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪಾಕಿಸ್ತಾನ ಪ್ರೇರಿತ ದಾಳಿಯಿಂದ 40 ಯೋಧರು ಹತರಾಗಿರುವ ಕಾರಣದಿಂದಾಗಿ ಪಾಕಿಸ್ತಾನ ವಿರುದ್ಧ ಎಲ್ಲಾ ರೀತಿಯ ಕ್ರಿಕೆಟ್ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಕ್ರಿಕೆಟಿಗ ಹರ್ಭಜನ್ ಸಿಂಗ್ ಸಹಿತ ಹಲವಾರು ಮಂದಿ ಆಗ್ರಹಿಸಿದ್ದಾರೆ.
ಜೂನ್ 16ರಂದು ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಭಾರತ ಆಡಬೇಕಾಗಿದೆ. ಆದರೆ ಗಾವಸ್ಕರ್ ಹೇಳುವ ಪ್ರಕಾರ ಆಡದೆ ಇರುವುದಕ್ಕಿಂತ ಪಾಕಿಸ್ತಾನವನ್ನು ಸೋಲಿಸಿ, ವಿಶ್ವಕಪ್ ನಲ್ಲಿ ಮುಂದುವರಿಯದಂತೆ ಮಾಡಬೇಕಂತೆ.
ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಆಡದೆ ಇದ್ದರೆ ಆಗ ಯಾರು ಗೆದ್ದ ಹಾಗೆ ಆಗುವುದು? ಸೆಮಿಫೈನಲ್ ಅಥವಾ ಫೈನಲ್ ಪಂದ್ಯಗಳ ಬಗ್ಗೆ ಮಾತನಾಡುತ್ತಿಲ್ಲ. ವಿಶ್ವಕಪ್ ನ ಗ್ರೂಪ್ ನಲ್ಲಿ ಆಡದೆ ಇದ್ದರೆ ಪಾಕ್ ಗೆ ಎರಡು ಅಂಕ ಬಿಟ್ಟುಕೊಡಬೇಕು. ಇದುವರೆಗೆ ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಭಾರತ ಸೋತಿಲ್ಲ. ನಾವು ಗೆದ್ದು ಪಾಕ್ ಮುಂದುವರಿಯದಂತೆ ಮಾಡಬೇಕು ಎಂದು ಗಾವಸ್ಕರ್ ತಿಳಿಸಿದ್ದಾರೆ.