ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋಲು ವಿರಾಟ್ ಕೊಹ್ಲಿ ಪಡೆಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಟೀಂ ಇಂಡಿಯಾದ ಮಾಜಿ ಕಪ್ತಾನ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ಭಾರತ 2-0 ಮುನ್ನಡೆ ಪಡೆದುಕೊಂಡ ಬಳಿಕ ಮುಂದಿನ ಮೂರು ಪಂದ್ಯ ಸೋಲುಂಡು ಸರಣಿ ಕಳಕೊಂಡಿತು.
ವಿಶ್ವಕಪ್ ನಲ್ಲಿ ಫೇವರಿಟ್ ಪಟ್ಟ ಪಡೆದುಕೊಂಡಿರುವ ಟೀಂ ಇಂಡಿಯಾ ಎಚ್ಚರಿಕೆ ಹೆಜ್ಜೆಯನ್ನಿಡಬೇಕು. ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋಲು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಯಾಕೆಂದರೆ ವಿಶ್ವಕಪ್ ನಲ್ಲಿ ಮತ್ತಷ್ಟು ಉತ್ತಮವಾಗಿ ಆಡಲು ಇದು ಪ್ರೇರೇಪಿಸಲಿದೆ ಹೇಳಿದ್ದಾರೆ.
ಕ್ರೀಡಾ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ದ್ರಾವಿಡ್, ಇದು ಸಮತೋಲನ ನೀಡಲಿದೆ. ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ನಾವು ತುಂಬಾ ಸುಲಭವಾಗಿ ವಿಶ್ವಕಪ್ ಗೆಲ್ಲಬಹುದು ಎಂದು ಮಾತನಾಡಲಾಗುತ್ತಿತ್ತು. ಯಾಕೆಂದರೆ ಕಳೆದ ಕೆಲವು ಸಮಯದಲ್ಲಿ ನಾವು ಏಕದಿನ ಕ್ರಿಕೆಟಿನಲ್ಲಿ ಪ್ರಾಬಲ್ಯ ಸಾಧಿಸಿದ್ದೇವೆ ಎಂದರು.