ಬೆಂಗಳೂರು: ಆಂಡ್ರೆ ರಸೆಲ್ ಅಬ್ಬರ ಆಟದ ನೆರವಿನಿಂದಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಶುಕ್ರವಾರ ನಡೆದ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ವಿರುದ್ಧ ಐದು ವಿಕೆಟ್ ಗಳ ಗೆಲುವು ದಾಖಲಿಸಿಕೊಂಡಿದೆ.
ರಸೆಲ್ ಬ್ಯಾಟಿಂಗ್ ಗೆ ಇಳಿಯುವ ವೇಳೆ ಕೊಲ್ಕತ್ತಾ ಗೆಲುವಿಗೆ 26 ಎಸೆತಗಳಲ್ಲಿ 67 ರನ್ ಅಗತ್ಯವಿತ್ತು. ಮರು ಓವರ್ ನಲ್ಲಿ 19 ರನ್ ಮಾಡಿದ ದಿನೇಶ್ ಕಾರ್ತಿಕ್ ವಿಕೆಟ್ ಕಳಕೊಂಡರು. ಅಂತಿಮ 18 ಎಸೆತಗಳಲ್ಲಿ 53 ರನ್ ಅಗತ್ಯವಿತ್ತು.
ರಸೆಲ್ ಬಿರುಗಾಳಿ ಮುಂದೆ ಆರ್ ಸಿಬಿ ಬೌಲರ್ ಗಳು ಕಂಗೆಟ್ಟು ಹೋದರು. ರಸೆಲ್ ಏಳು ಸಿಕ್ಸ್ ಮತ್ತು ಒಂದು ಬೌಂಡರಿ ಬಾರಿಸಿ, ಇನ್ನೂ ಐದು ಎಸೆತ ಬಾಕಿ ಇರುವಂತೆ ಗೆಲುವು ದಾಖಲಿಸಿಕೊಳ್ಳಲು ನೆರವಾದರು. ಕೆಕೆಆರ್ ಐದು ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿ ಗೆಲುವು ತನ್ನದಾಗಿಸಿಕೊಂಡಿತು. ಐದು ಪಂದ್ಯಗಳಲ್ಲಿ ಆರ್ ಸಿಬಿ ಖಾತೆ ತೆರೆಯಲು ವಿಫಲವಾಗಿದೆ.
18ನೇ ಓವರ್ ನಲ್ಲಿ ರಸೆಲ್ ಮಾರ್ಕಸ್ ಸ್ಟೊನಿಸ್ ಹ್ಯಾಟ್ರಿಕ್ ಸಿಕ್ಸರ್ ಗಳನ್ನು ಬಾರಿಸಿದರು. ಇದರ ಮರು ಓವರ್ ನಲ್ಲಿ ಟಿಮ್ ಸೌಥಿ ಓವರ್ ನಲ್ಲಿ 6-6-6-4-6 ರನ್ ಬಾರಿಸಿತು. ರಸೆಲ್ ಮತ್ತು ಶುಬ್ಮನ್ ಗಿಲ್ ಆರನೇ ವಿಕೆಟಿಗೆ 14 ಎಸೆತಗಳ್ಲಲಿ 53 ರನ್ ಸಿಡಿಸಿದರು.
ಕೊಲ್ಕತ್ತಾಗೆ ಕ್ರಿಸ್ ಲೈನ್ 43 ರನ್ ಮತ್ತು ಸುನಿಲ್ ನರೈನ್ 10 ಉತ್ತಮ ಆರಂಭ ಒದಗಿಸಿಕೊಟ್ಟರು. ರಾಬಿನ್ ಉತ್ತಪ್ಪ 33 ರನ್ ಬಾರಿಸಿ ತಂಡದ ಮೊತ್ತವನ್ನು ಉತ್ತಮಪಡಿಸಿದರು.
ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಬೆಂಗಳೂರು ಕೊಹ್ಲಿ 84, ವಿಲಿಯರ್ಸ್ 63 ರನ್ ಬಾರಿಸಿ ತಂಡದ ಮೊತ್ತವು ಮೂರು ವಿಕೆಟಿಗೆ 205 ರನ್ ಬಾರಿಸಲು ನೆರವಾದರು.