ಅಡಿಲೇಡ್: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಡೇನೈಟ್ ಟೆಸ್ಟ್ ನಲ್ಲಿ ಚೊಚ್ಚಲ ತ್ರಿಶತಕ ಬಾರಿಸಿದ್ದಾರೆ.
ಎರಡನೇ ದಿನವಾದ ಶನಿವಾರ ವಾರ್ನರ್ ಔಟಾಗದೆ 335 ರನ್ ಬಾರಿಸಿದರು. ಆಸ್ಟ್ರೇಲಿಯಾ ಮೂರು ವಿಕೆಟ್ ನಷ್ಟಕ್ಕೆ 589 ರನ್ ಮಾಡಿದೆ.
ಈ ತ್ರಿಶತಕದ ನೆರವಿನಿಂದ ವಾರ್ನರ್ ಈ ಮೈದಾನದಲ್ಲಿ ಗರಿಷ್ಠ ರನ್ ಮಾಡಿದ ಬ್ಯಾಟ್ಸ್ ಮೆನ್ ಎಂಬ ದಾಖಲೆಯನ್ನು ಮುರಿದರು. ಈ ಮೊದಲು ಡಾನ್ ಬ್ರಾಡ್ಮನ್ ಅವರು ಇದೇ ಮೈದಾನದಲ್ಲಿ 299 ರನ್ ಬಾರಿಸಿದ್ದರು. ಇದೇ ವೇಳೆ ಅವರು ಬ್ರಾಡ್ಮನ್ ಬಾರಿಸಿದ್ದ 334 ರನ್ ಗಳ ದಾಖಲೆಯನ್ನು ಕೂಡ ಮುರಿದರು.
ಆಸ್ಟ್ರೇಲಿಯಾದ ಪರವಾಗಿ ಗರಿಷ್ಠ ರನ್ ಮಾಡಿದ ದಾಖಲೆಯು ಮ್ಯಾಥ್ಯೂ ಹೇಡನ್ ಹೆಸರಿನಲ್ಲಿದೆ. ಹೇಡನ್ 2003 ಪರ್ತ್ ನಲ್ಲಿ ಜಿಂಬಾಬ್ವೆ ವಿರುದ್ಧ 380 ರನ್ ಬಾರಿಸಿದ್ದರು.
ವಾರ್ನರ್ 389 ಎಸೆತಗಳಲ್ಲಿ 300 ರನ್ ಬಾರಿಸಿದರು. ಇದು ಟೆಸ್ಟ್ ಕ್ರಿಕೆಟಿನ ನಾಲ್ಕನೇ ಅತೀ ವೇಗದ ತ್ರಿಶಕವಾಗಿದೆ. 2007-08ರಲ್ಲಿ ಭಾರತದ ವೀರೇಂದ್ರ ಸೇವಾಗ್ ಅವರು 278 ಎಸೆತಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈಯಲ್ಲಿ ತ್ರಿಶತಕ ಬಾರಿಸಿರುವುದು ಇದುವರೆಗಿನ ಅತೀ ವೇಗದ ತ್ರಿಶತಕವಾಗಿದೆ.