News Kannada
Thursday, December 08 2022

ಕ್ರೀಡೆ

ಮೂಡುಬಿದಿರೆ: ರಾಷ್ಟ್ರೀಯ ಅಂತರ್ ವಿವಿ ಕ್ರೀಡಾ ಕೂಟಕ್ಕೆ ಅನುದಾನದ ಬರ

Photo Credit :

ಮೂಡುಬಿದಿರೆ: ರಾಷ್ಟ್ರೀಯ ಅಂತರ್ ವಿವಿ ಕ್ರೀಡಾ ಕೂಟಕ್ಕೆ ಅನುದಾನದ ಬರ

ಮೂಡುಬಿದಿರೆ: ಭಾರತದ ಯುವಸಮುದಾಯವು ಕ್ರೀಡಾಸ್ಫೂರ್ತಿಯನ್ನು ಸ್ಪುರಿಸುವ ಸಲುವಾಗಿ ನಿರ್ಮಿತವಾದ ಅಂತರ್ ವಿವಿ ಕ್ರೀಡಾಕೂಟವೆಂಬ ಕ್ರೀಡಾಸಂಭ್ರಮದಲ್ಲಿ ಕ್ರೀಡಾಪ್ರತಿಭೆಗಳೆಲ್ಲ ಒಂದೆಡೆ ಸಮಾವೇಶಿತರಾಗಿ ತಮ್ಮ ಪ್ರತಿಭಾ ಸಾಮಥ್ರ್ಯದ ಮುಖೇನ ಪದಕಗಳನ್ನು ಗೆಲ್ಲುವ ಉತ್ಸಾಹದಿಂದ ಕ್ರೀಡಾಮಗ್ನರಾಗಿ ಸೇರಿದರು. ಕ್ರೀಡಾಕೂಟವನ್ನು ಸ್ವತಃ ಕೇಂದ್ರ ಕ್ರೀಡೆ ಮತ್ತು ಯುವಜನ ಖಾತೆಯ ರಾಜ್ಯ ಸಚಿವ ಕಿರಣ್ ರೆಜಿಜು ಸ್ವ ಆಸಕ್ತಿಯಿಂದ ದೆಹಲಿಯಿಂದ ಬಂದು ಉದ್ಘಾಟಿಸಿ ಸಂಭ್ರಮಿಸಿದರು. 50 ವಿಭಾಗಗಳಲ್ಲಿ ಸ್ಪರ್ಧಿಸಲು ದೇಶದ ಸುಮಾರು 400 ವಿವಿಗಳ 4494ರಷ್ಟು ಕ್ರೀಡಾ ಪ್ರತಿಭೆಗಳು ಕ್ರೀಡಾಕಾಶಿಯಂತಿರುವ ಮೂಡುಬಿದಿರೆಯಲ್ಲಿ ಒಂದಾದರು. ನಿಬ್ಬೆರಗಾಗಿಸುವ ಸ್ಪರ್ಧೆಯಲ್ಲಿ 9 ಕೂಟ ದಾಖಲೆಗಳು ಕ್ರೀಡಾಲೋಕವನ್ನು ಬೆಳಗಿದವು. ಕ್ರೀಡ ಸಾಧನೆಯನ್ನು ಸವಿಯಲು ಕ್ರೀಡಾಭಿಮಾನಿಗಳೂ ಮೈದಾನದತ್ತ ದೌಡಾಯಿಸಿ ಬಂದರು. ಆದರೆ ವಿಪರ್ಯಾಸವೆಂದರೆ ಯುವಕರು ನಮ್ಮ ದೇಶದ ಆಸ್ತಿ ಎಂದು ಗಂಟೆಗಟ್ಟಲೆ ಮಾತಿನಲ್ಲೇ ಮೋಡಿ ಮಾಡಿ ಭಾಷಣ ಬಿಗಿಯುವ ನಮ್ಮ ಜವಾಬ್ದಾರಿಯುತ ಜನಪ್ರತಿನಿಧಿಗಳನೇಕ ಮಂದಿ ಮಾತ್ರ ತಪ್ಪಿಯೂ ಈ ಕಡೆ ತಲೆ ಹಾಕಲಿಲ್ಲ. ಬರುವುದು ಬಿಡಲಿ ಸುಮಾರು 4 ಕೋಟಿ ವೆಚ್ಚದ ಈ ಕ್ರೀಡಾಕೂಟಕ್ಕೆ ಸರಕಾರದ ಪ್ರತಿನಿಧಿಗಳಾಗಿ ಪೈಸೆ ಅನುದಾನವನ್ನೂ ನೀಡುವ ಉತ್ಸಾಹ ತೋರಿಸಲಿಲ್ಲ ಎನ್ನುವುದೇ ವಿಶೇಷ, ವಿಷಾದದ ವಿಷಯ.

ಕೇಂದ್ರ ಸಚಿವ ರೆಜಿಜು ಕ್ರೀಡಾಕೂಟವನ್ನು ಉದ್ಘಾಟಿಸಿ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಸ್ವ ಆಸಕ್ತಿಯಿಂದ ನಾಲ್ಕನೇ ಬಾರಿಗೆ ಇಂತಹದ್ದೊಂದು ಕ್ರೀಡಾ ಜಾತ್ರೆಯನ್ನು ಊರಸಡಗರದಂತೆ ಸಂಘಟಿಸಿರುವುದನ್ನು ನೋಡಿ, ಆಸ್ವಾದಿಸಿದ ಅವರು ನಿಬ್ಬೆರಗಾಗಿದ್ದಾರೆ. ಇದೊಂದು ನನ್ನ ಜೀವನದ ಅವಿಸ್ಮರಣೀಯ ಅನುಭವ ಎಂದು ತಲೆದೂಗಿ ಹಾಡಿ ಹೊಗಳಿರುತ್ತಾರೆ. ಆಯೋಜನೆಯ ಸಂಸ್ಕಾರ, ವ್ಯವಸ್ಥಿತ ವ್ಯವಸ್ಥೆ, ಸಾಕಷ್ಟು ಶ್ರದ್ಧೆ, ಸ್ವಚ್ಛತೆ, ಅಚ್ಚುಕಟ್ಟುತನ, ಆರೋಗ್ಯಯುತ ಊಟೋಪಚಾರ, ಕ್ರೀಡಾಪಟುಗಳಿಗೆ ಗೌರವಾದರ, ವಸತಿ, ನಗದು ಪುರಸ್ಕಾರ ಎಲ್ಲವನ್ನೂ ಕ್ರೀಡಾ ಪ್ರೀತಿಯಿಂದ ನೋಡಿಕೊಂಡ ಆಳ್ವಾಸ್ ಮತ್ತು ಅಲ್ಲಿನ ಕ್ರೀಡಾ ಪ್ರತಿಭೆಗಳು ಮಂಗಳೂರು ವಿವಿ ತಂಡದ ಮೂಲಕ ಸತತ ನಾಲ್ಕನೇ ಬಾರಿಗೆ ಸಮಗ್ರ ಪ್ರಶಸ್ತಿ ತಮ್ಮದಾಗಿಸಿ ಮತ್ತೆ ವಿಜಯ ದುಂದುಭಿಯನ್ನು ಮೊಳಗುತ್ತಾರೆ. ಇದು ಕಳೆದ ಜ2ರಿಂದ 6ರವರೆಗೆ ಇಲ್ಲಿನ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಜರಗಿದ 80ನೇ ಅಖಿಲ ಭಾರತ ಅಂತರ್ ವಿವಿ ಕ್ರೀಡಾ ಕೂಟದ ಪಕ್ಷಿ ನೋಟ. ಇಲ್ಲಿ ಕಂಡು ಬಂದ್ದದ್ದು ಕೇವಲ ಸಂಘಟಕರ ಕ್ರೀಡಾ ಸ್ಫೂರ್ತಿ- ಕ್ರೀಡಾಪ್ರೇಮವೇ ಹೊರತು ಮತ್ತು ಸರಕಾರದ ಕನಿಷ್ಠ ಕಾಳಜಿಯು ಕಂಡು ಬಂದಿಲ್ಲ. ಇದು ನಿರ್ಲಕ್ಷ್ಯದ ಪರಮಾವಧಿಯೋ? ಆಲೋಚಿಸಬೇಕು.

ಪೈಸೆ ಅನುದಾನವಿಲ್ಲ, ಜನಪ್ರತಿನಿಧಿಗಳ ಸುಳಿವಿಲ್ಲ.
4ನೇ ಬಾರಿಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಜೊತೆ ಸೇರಿಕೊಂಡು ಈ ಕ್ರೀಡಾಕೂಟದ ಮುತುವರ್ಜಿ ವಹಿಸಿರುವುದು ಆಳ್ವಾಸ್ ಸಂಸ್ಥೆಯ ಕ್ರೀಡಾಪ್ರೀತಿಯನ್ನು ಸಾಕ್ಷಿ ಸಮೇತವಾಗಿ ಬಣ್ಣಿಸುತ್ತದೆ. ಬರೋಬ್ಬರಿ ನಾಲ್ಕು ಕೋಟಿ ವೆಚ್ಚದ ಈ ಐದು ದಿನಗಳ ಕ್ರೀಡೋತ್ಸವದಲ್ಲಿ ಅದ್ದೂರಿಯಾಗಿದ್ದ ಸಾಂಸ್ಕøತಿಕ ಮೆರವಣಿಗೆಯೇ ಕ್ರೀಡಾಸ್ಪೂರ್ತಿಗೆ ಭಾಷ್ಯಬರೆದಂತಿತ್ತು. ಈವರೆಗಿನ 80 ಕ್ರೀಡಾಕೂಟಗಳ ಪೈಕಿ ನಮ್ಮ ರಾಜ್ಯದಲ್ಲಿ ಈ ಹಬ್ಬ ನಡೆದಿರುವುದು ಬರೇ ಐದು ಬಾರಿ. ಈ ಬಾರಿಯ ಕ್ರೀಡಾಕೂಟಕ್ಕೆ ಪೈಸೆ ಅನುದಾನ ಹರಿದು ಬಾರದೇ ಇದ್ದದ್ದು ತಿರಸ್ಕøತ ಮನೋಭೂಮಿಕೆಯೇ? ಯೋಚಿಸಬೇಕು.

See also  ದೇಹದಾರ್ಢ್ಯ ಸ್ಪರ್ಧೆಯಲ್ಲಿ ಧರ್ಮವರ್ಧರೆಡ್ಡಿ ಶ್ರೀ ಮಂಡ್ಯ-2017

ಸರ್ಕಾರ ಇಂತಹ ಕ್ರೀಡಾಕೂಟವನ್ನು ಪ್ರೋತ್ಸಾಹಿಸಬೇಕು. ಅದು ಭಿಕ್ಷೆಯಲ್ಲ. ಸರ್ಕಾರದ ಕರ್ತವ್ಯವೂ ಹೌದು. ರಾಜ್ಯ ಕ್ರೀಡಾ ಸಚಿವರಾಗಿದ್ದ ಈಶ್ವರಪ್ಪ ಆರಂಭದಲ್ಲಿ ಈ ಕ್ರೀಡಾಕೂಟದ ಕಛೇರಿ ಉದ್ಘಾಟನೆಗೆ ಬಂದಾಗ 50ಲಕ್ಷ ಅನುದಾನದ ಭರವಸೆ ನೀಡಿದ್ದರು. ಅತಿಥೇಯ ರಾಜೀವಗಾಂಧಿ ವಿಜ್ಞಾನ ವಿವಿ ಒಂದು ಕೋಟಿ ರೂ ಕೊಟ್ಟಿತು. ಆದರೆ ಸರ್ಕಾರದ ಭರವಸೆಯ 50 ಲಕ್ಷ ಬಿಡಿ ನಯಾಪೈಸೆಯೂ ಬರಲಿಲ್ಲ. ಹೋಗಲಿ ಉದ್ಘಾಟನಾ ಸಮಾರಂಭಕ್ಕೆ ಬರಬೇಕಾಗಿದ್ದ ಕ್ರೀಡಾ ಸಚಿವ, ಉಪಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಸಚಿವರುಗಳು ಸಂಸದರು ಹೀಗೆ ಸಾಲು ಸಾಲು ರಾಜಕಾರಣಿಗಳು ಎಲ್ಲರೂ ಗೈರು. ಉಳಿದ ಐದು ದಿನಗಳಲ್ಲಾದರೂ ಇತ್ತ ಮುಖ ತೋರಿಸಬಹುದಿತ್ತು. ಆದರೆ ಪಾಪ ಯಾರಿಗೂ ಪುರುಸೊತ್ತೇ ಆಗಿಲ್ಲ.
ಸ್ಥಳೀಯ ಶಾಸಕರು ಉದ್ಘಾಟನಾ ಸಮಾರಂಭದಲ್ಲಿದ್ದರೂ ಸಮಾರೋಪ ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ನೆಮ್ಮದಿಯ ಸಂಗತಿ ಎಂದರೆ ಅತಿಥಿಯಾಗಿದ್ದ ಮಾಜಿ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಬಿಡುವು ಮಾಡಿಕೊಂಡು ಐದೂ ದಿನಗಳಲ್ಲಿ ಕ್ರೀಡಾಂಗಣದಲ್ಲಿ ಹಾಜರಿದ್ದರು. ಇದು ರಾಜಕಾರಣ ಮೀರಿದ ಕ್ರೀಡಾ ಪ್ರೀತಿ. ಅಂದ ಹಾಗೆ ಕಳೆದ ಬಾರಿ ಕ್ರೀಡಾಕೂಟದ ವೇಳೆಗೆ ಕ್ರೀಡಾ ಸಚಿವರಾಗಿದ್ದಾಗ ಇದೇ ಅಭಯಚಂದ್ರ ಜೈನ್ ರಾಜ್ಯ ಸರಕಾರದಿಂದ 50 ಲಕ್ಷದ ಕ್ರೀಡಾ ಸಾಮಾಗ್ರಿ ಮತ್ತು 50 ಲಕ್ಷರೂ ಅನುದಾನ ಸಾಕಷ್ಟು ಮೊದಲೇ ಬಿಡುಗಡೆ ಮಾಡಿದ್ದರು ಎನ್ನುವುದೂ ಇಲ್ಲಿ ಗಮನಾರ್ಹ. ಇನ್ನೋರ್ವ ಮಾಜಿ ಸಚಿವ ಕೆ. ಅಮರನಾಥ ಶೆಟ್ಟರೂ ಅನಾರೋಗ್ಯದ ನಡುವೆಯೂ ಪಾಲ್ಗೊಂಡದ್ದು ಅವರಿಗೆ ಸಂಘಟಕ ಡಾ. ಎಂ. ಮೋಹನ ಆಳ್ವರ ಸಾಧನೆ, ಸಾಹಸದ ಬಗ್ಗೆ ಇರುವ ಅಭಿಮಾನ, ಸಂಘಟನೆಯ ಬಗೆಗಿನ ಕಾಳಜಿ ವ್ಯಕ್ತವಾಗಿದೆ.

ಹೊಸ ದಾಖಲೆಯ ನಿರ್ಮಾತೃ ಡಾ. ಆಳ್ವ
ಕಳೆದ ಮೂರು ವರ್ಷಗಳಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರ ಮುತುರ್ವರ್ಜಿಯಿಂದ ಕೂಟ ದಾಖಲೆ ಮಾಡಿದವರಿಗೆ ತಲಾ ರೂ 25 ಸಾವಿರ, ಚಿನ್ನದ ಪದಕ ಗೆದ್ದವರಿಗೆ 15 ಸಾವಿರ, ಬೆಳ್ಳಿ ಪದಕ ವಿಜೇತರಿಗೆ 10 ಸಾವಿರ, ಕಂಚು ಗೆದ್ದವರಿಗೆ 5 ಸಾವಿರ , ಕೂಟಗಳ ಸಂಘಟನೆಗೆ ಆರು ವಿವಿಗಳಿಗೆ ತಲಾ ರೂ 10 ಸಾವಿರ, ಗರಿಷ್ಠ ಪದಕ ಗೆದ್ದುಕೊಟ್ಟ ತರಬೇತುದಾರರಿಗೂ ತಲಾ 25 ಸಾವಿರ ನಗದು ಪುರಸ್ಕಾರ ನೀಡುವ ದೊಡ್ಡ ಮನಸ್ಸು ಡಾ. ಆಳ್ವರಿಂದಾಗಿದೆ. ಕಳೆದ 77 ವರ್ಷಗಳಲ್ಲಿ ಗೆದ್ದವರಿಗೆ ನಗದು ಪುರಸ್ಕಾರ ನೀಡಿರಲಿಲ್ಲ. ಆಳ್ವರ ಈ ಕ್ರೀಡಾ ಪ್ರೇಮ ಕ್ರೀಡಾ ರಂಗದಲ್ಲೇ ಹೊಸ ದಾಖಲೆಯನ್ನು ಸೃಜಿಸಿದೆ.

ಆಳ್ವರ ನೋವು ಆಳುವವರಿಗೆ ಅರ್ಥವಾಗದೇ?
ಆಳ್ವರ ಉತ್ಸಾಹ, ಕ್ರೀಡಾ ಪ್ರೋತ್ಸಾಹದಿಂದ ಮಂಗಳೂರು ವಿವಿಯ ತಂಡದ 81 ಕ್ರೀಡಾಪಟುಗಳ ಪೈಕಿ 75 ಮಂದಿ ಆಳ್ವಾಸ್ ಪ್ರತಿಭೆಗಳು ವಿವಿಯನ್ನು 4ನೇ ಬಾರಿಗೆ ಚಾಂಪಿಯನ್ ಪಟ್ಟದಲ್ಲಿ ಕೂರಿಸಿವೆ. ವಿವಿ ಹೆಸರಲ್ಲಿರುವ ಎಲ್ಲ 15 ಕೂಟದಾಖಲೆಗಳೂ ಆಳ್ವಾಸ್ ವಿದ್ಯಾರ್ಥಿಗಳದ್ದೇ. ಸದರಿ ರಾಜಕೀಯ ವ್ಯವಸ್ಥೆಯ ಕ್ರೀಡಾ ಕ್ಷೇತ್ರದ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಡಾ. ಎಂ. ಮೋಹನ ಆಳ್ವರಲ್ಲಿ ಬೇಸರವಿದೆ. ತನ್ನನ್ನು ಶಿಕ್ಷಣದ ವ್ಯಾಪಾರಿ ಎನ್ನುವವರಿಗೆ ಈ ಕ್ರೀಡಾ ಸಂಘಟನೆ, ಅದರ ಹಿಂದಿರುವ ಖರ್ಚು ವೆಚ್ಚದ ಅರಿವಿರಬೇಕಲ್ಲ. ಈಗ ಅವರು ನನ್ನನ್ನು ಕ್ರೀಡಾ ವ್ಯಾಪಾರಿ, ಸಾಂಸ್ಕೃತಿಕ ವ್ಯಾಪಾರಿ ಎಂದು ಕರೆಯಬಹುದಲ್ಲ ಎನ್ನುವ ಸಾತ್ವಿಕ ಸಿಟ್ಟಿದೆ. ಆದರೆ ಆಳ್ವರ ನೋವು ಆಳುವವರಿಗೆ ಅರ್ಥವಾಗಬೇಕಲ್ಲ. ಆಳ್ವರ ಕ್ರೀಡಾ ಸಂಘಟನಾ ಪ್ರೇಮ ನಮ್ಮನ್ನು ಆಳುವವರಿಗೆ ಅರ್ಥವಾದೀತೇ?

See also  ಥ್ರೋಬಾಲ್ ತಂಡದ ವ್ಯವಸ್ಥಾಪಕರಾಗಿ ಸುಬ್ರಮಣ್ಯ

 

 

 

 

 

 

 

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು