ಕರಾಚಿ: ಪಾಕಿಸ್ತಾನದ ಕ್ರಿಕೆಟ್ ತಂಡದಲ್ಲಿನ ನೂತನ ಆಟಗಾರರ ನಿಜವಾದ ವಯಸ್ಸಿನ ಬಗ್ಗೆ ಬಯಲು ಮಾಡಿದ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮದ್ ಆಸಿಫ್.
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಕೆಲ ಯುವ ವೇಗದ ಬೌಲರ್ ಗಳು ಈಗ ಸೇರಿಕೊಂಡಿದ್ದು, ಅವರ ನಿಜವಾದ ವಯಸ್ಸು ಅವರ ಜನ್ಮದಾಖಲೆ ಪತ್ರಗಳಿಗಿಂತ ಒಂಬತ್ತು ಅಥವಾ ಹತ್ತು ವರ್ಷ ಹೆಚ್ಚಿದೆ ಎಂದು ಮಾಜಿ ಕ್ರಿಕೆಟಿಗ ಆರೋಪಿಸಿದ್ದಾರೆ.
‘ಪಾಕ್ ತಂಡದಲ್ಲಿರುವ ಯುವ ವೇಗದ ಬೌಲರ್ಗಳ ವಯಸ್ಸು ಕಾಗದದ ಮೇಲೆ 17-18 ವರ್ಷ ಎಂದಿದೆ. ಆದರೆ ನಿಜ ಹೇಳಬೇಕೆಂದರೆ ಅವರು 27-28 ವರ್ಷ ವಯಸ್ಸಿನವರಾಗಿದ್ದಾರೆ. ಈ ಕಾರಣದಿಂದಲೇ ಈ ಯುವ ವೇಗಿಗಳಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಸುದೀರ್ಘ ಸ್ಪೆಲ್ಗಳನ್ನು ಎಸೆಯಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ದೂರಿದ್ದಾರೆ.
ಆಸಿಫ್ ಮಾಜಿ ಸಹ-ಆಟಗಾರ ಕಮ್ರಾನ್ ಅಕ್ಮಲ್ ಅವರ ಯುಟ್ಯೂಬ್ ಚಾನಲ್ನೊಂದಿಗೆ ಮಾತನಾಡುತ್ತ ಈ ವಿಷಯದ ಬಗ್ಗೆ ಹೇಳಿಕೊಂಡಿದ್ದು, ಹೆಚ್ಚಿನ ವಯಸ್ಸಿನಿಂದಾಗಿ ಅವರ ದೇಹ ನಿರೀಕ್ಷೆಯ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಅವರಿಗೆ 20-25 ಓವರ್ಗಳ ಸ್ಪೆಲ್ ಎಸೆಯಲು ಸಾಧ್ಯವಾಗುತ್ತಿಲ್ಲ. 5-6 ಓವರ್ಗಳ ಸ್ಪೆಲ್ ಬಳಿಕ ಅವರಿಗೆ ಮೈದಾನದಲ್ಲಿ ಫೀಲ್ಡಿಂಗ್ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.