ಟಿ-20 ವಿಶ್ವಕಪ್ 2021ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸಬೇಕು ಎಂದು ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಬೇಡಿಕೆ ಇಟ್ಟಿದ್ದಾರೆ.
ಎರಡು ದೇಶಗಳ ನಡುವಿನ ಉದ್ವಿಗ್ನ ಸಂಬಂಧದಿಂದಾಗಿ ಈ ಪಂದ್ಯವನ್ನು ಮರುಪರಿಶೀಲಿಸಬೇಕು ಎಂದರು. ಎರಡು ರಾಷ್ಟ್ರಗಳ ನಡುವಿನ ಮೊದಲ ಪಂದ್ಯಕ್ಕಾಗಿ ಈಗಾಗಲೇ ಅಕ್ಟೋಬರ್ 24ರ ದಿನಾಂಕವನ್ನು ನಿಗದಿಪಡಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹತ್ಯೆಗಳ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ನಡೆಸಬೇಕೇ ಎಂಬ ಪ್ರಶ್ನೆಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಉತ್ತಮವಾಗಿಲ್ಲದ ಕಾರಣ ಪಂದ್ಯವನ್ನು ಮರುಪರಿಶೀಲಿಸಬೇಕು ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯವನ್ನು ರದ್ದುಗೊಳಿಸುವಂತೆ ಪಂಜಾಬ್ ಸಚಿವ ಪರ್ಗತ್ ಸಿಂಗ್ ಕೂಡ ಕರೆ ನೀಡಿದ್ದು, ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ನಾವು ಏನನ್ನಾದರೂ ತಪ್ಪಿಸಬೇಕು ಎಂದು ಹೇಳಿದ್ದರು.