ಬೆಂಗಳೂರು: ಪ್ರೋ ಕಬಡ್ಡಿ ಹಬ್ಬಕ್ಕೆ ವೇದಿಕೆ ಸಿದ್ಧವಾಗಿದೆ. ವಿವೋ ಪ್ರೋ ಕಬಡ್ಡಿ ಲೀಗ್ ಎರಡು ವರ್ಷಗಳ ನಂತರ ಮತ್ತೆ ಕ್ರೀಡಾಭಿಮಾನಿಗಳನ್ನು ರಂಜಿಸಲಿದೆ ಹೀಗಾಗಿ ಬೆಂಗಳೂರು ಬುಲ್ಸ್ ತಂಡ ಈ ಬಾರಿ ಕಪ್ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದ್ದು ಅದಕ್ಕೆ ಬೇಕಾದ ಸಿದ್ಧತೆ ಗಳನ್ನು ಮಾಡಿಕೊಂಡಿದೆ.
ಡಿಸೆಂಬರ್ 22 ರಂದು ರಾತ್ರಿ 7:30 ಗಂಟೆಗೆ ಬೆಂಗಳೂರಿನ ವೈಟ್ ಫೀಲ್ಡ್ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್ನಲ್ಲಿ ಯು ಮುಂಬಾ ತಂಡದೊಂದಿಗೆ ಬೆಂಗಳೂರು ಬುಲ್ಸ್ ಸೆಣೆಸಾಡುವ ಮೂಲಕ ಪಂದ್ಯಾವಳಿಗೆ ಶುಭಾರಂಭ ದೊರೆಯಲಿದೆ.
ಕೊರೋನಾ ಕಾರಣದಿಂದ ಹಿಂದಿನ ಎರಡು ವರ್ಷಗಳ ಆವೃತ್ತಿ ನಡೆದಿರಲಿಲ್ಲ. ಸೀಸನ್ 6 ಚಾಂಪಿಯನ್ಸ್ ಮತ್ತು ಈ ವರ್ಷದ ಫೆವರೇಟ್ ತಂಡ ಬೆಂಗಳೂರು ಬುಲ್ಸ್ ಡಿಸೆಂಬರ್ 22 ರಿಂದ ತವರಿನಿಂದಲೇ ಅಭಿಯಾನ ಆರಂಭಿಸಲಿದೆ.
ಕೊರೋನಾ ಸೋಂಕಿನ ಕಾರಣ ಪ್ರಪಂಚದಲ್ಲಿಯೇ ಕ್ರೀಡಾ ಚಟುವಟಿಕೆಗೆ ಬ್ರೇಕ್ ಬಿದ್ದಿತ್ತು. ಈಗ ಪರಿಸ್ಥಿತಿ ತಹಬದಿಗೆ ಬಂದಿರುವ ಕಾರಣ ಒಂದೊಂದೇ ಪಂದ್ಯಾವಳಿ ಆರಂಭವಾಗುತ್ತಿವೆ. ಕೊರೋನಾ ನಿಯಮಗಳನ್ನು ಪಾಲಿಸುತ್ತ ಕಟ್ಟುನಿಟ್ಟಾದ ಬಯೋ ಬಬಲ್ ವ್ಯವಸ್ಥೆಯಲ್ಲಿ ತಂಡಗಳು ಕಣಕ್ಕೆ ಇಳಿಯಲಿವೆ. ಬೆಂಗಳೂರು ಬುಲ್ಸ್ ತಂಡ ಡಿಸೆಂಬರ್ ನಲ್ಲಿ 4 ಮತ್ತು ಜನವರಿಯಲ್ಲಿ 7 ಪಂದ್ಯಗಳು ಸೇರಿ ಮೊದಲಾರ್ಧದಲ್ಲಿ ಬುಲ್ಸ್ 11 ಪಂದ್ಯಗಳನ್ನು ಆಡಲಿದೆ.
ಹಾಗೆ ನೋಡಿದರೆ ಬೆಂಗಳೂರು ಬುಲ್ಸ್ ತಂಡವು ಪ್ರೋ ಕಬಡ್ಡಿಯಲ್ಲಿ ಸದಾ ಫೇವರೇಟ್ ತಂಡವಾಗಿದೆ ಜನವರಿ 2019 ರಲ್ಲಿ ನಡೆದ ಫೈನಲ್ನಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ಅನ್ನು ಸೋಲಿಸುವ ಮೂಲಕ ಸೀಸನ್ 6 ರಲ್ಲಿ ಚಾಂಪಿಯನ್ ಆಗಿತ್ತು. ಎರಡನೇ ಸೀಸನ್ ನಲ್ಲಿ ರನ್ನರ್ ಅಪ್ ಆಗಿದ್ದರೆ ಸೀಸನ್ 1 ಮತ್ತು 7 ರಲ್ಲಿ, ಸೆಮಿಫೈನಲ್ ಪ್ರವೇಶ ಮಾಡಿತ್ತು.
ಕಳೆದ ಬಾರಿಗಿಂತ ಈ ಬಾರಿ ಬುಲ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಬುಲ್ಸ್ ಅನುಭವಿ ಆಟಗಾರರನ್ನು ಉಳಿಸಿಕೊಳ್ಳುವುದರೊಂದಿಗೆ ವಿದೇಶಿ ಆಟಗಾರರ ಸೇರ್ಪಡೆ ಮಾಡಿಕೊಂಡಿದೆ. ಅಬೋಲ್ಫಾಜ್ಲ್ ಮಗ್ಸೋಡ್ಲೌ ಮಹಾಲಿ (ಇರಾನ್), ಡಾಂಗ್ ಜಿಯೋನ್ ಲೀ (ದಕ್ಷಿಣ ಕೊರಿಯಾ), ಜಿಯಾವುರ್ ರೆಹಮಾನ್ (ಬಾಂಗ್ಲಾದೇಶ) ಆಟಗಾರರು ತಂಡ ಸೇರಿಕೊಂಡಿದ್ದಾರೆ. ರೆಕಾರ್ಡ್ ಬ್ರೇಕಿಂಗ್ ರೈಡರ್ ಪವನ್ ಕುಮಾರ್ ಸೆಹ್ರಾವತ್ ನಾಯಕನಾಗಿ ಬುಲ್ಸ್ ತಂಡ ಮುನ್ನಡೆಸಲಿದ್ದಾರೆ.
ಮೂರನೇ ಸೀಸನ್ ನಿಂದ ಪವನ್ ಬೆಂಗಳೂರು ಬುಲ್ಸ್ ತಂಡದ ಪರವಾಗಿ ಆಡುತ್ತ ಬಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿಯೂ ಪವನ್ ಹೆಸರು ಮಾಡಿದ್ದಾರೆ. ದಕ್ಷಿಣ ಏಷ್ಯಾದ ಕ್ರೀಡಾಕೂಟದಲ್ಲಿ ಭಾರತೀಯ ತಂಡದ ಭಾಗವಾಗಿ ಚಿನ್ನಕ್ಕೆ ಕೊರಳು ಒಡ್ಡಿದ್ದರು. ಪ್ರೋ ಕಬಡ್ಡಿಸೀಸನ್ 6 ಮತ್ತು 7 ರಲ್ಲಿ ಕ್ರಮವಾಗಿ “ಅತ್ಯಂತ ಮೌಲ್ಯಯುತ ಆಟಗಾರ” ಮತ್ತು “ಅತ್ಯುತ್ತಮ ರೈಡರ್” ಪುರಸ್ಕಾರಕ್ಕೆ ಪಾತ್ರವಾಗಿದ್ದರು.
ತಂಡದಲ್ಲಿ ಪವನ್ ಕುಮಾರ್ ಸೆಹ್ರಾವತ್ (ನಾಯಕ), ಮಹೇಂದರ್ ಸಿಂಗ್ (ಉಪನಾಯಕ), ಅಬೋಲ್ಫಜಲ್ ಮಗ್ಸೋಡ್ಲೌ ಮಹಾಲಿ, ಡಾಂಗ್ ಜಿಯೋನ್ ಲೀ, ಜಿಯಾವುರ್ ರೆಹಮಾನ್, ಅಮಿತ್ ಶೆರಾನ್, ಸೌರಭ್ ನಂದಲ್, ಮೋಹಿತ್ ಸೆಹ್ರಾವತ್, ಚಂದ್ರನ್ ರಂಜಿತ್, ದೀಪಕ್ ನರ್ವಾಲ್ ಜಿಬಿ , ಮಯೂರ್ ಜಗನ್ನಾಥ್ ಕದಮ್, ವಿಕಾಸ್, ಭರತ್ ಹೂಡಾ, ಅಮನ್ ಅಂತಿಲ್, ನಸೀಬ್, ರೋಹಿತ್ ಕುಮಾರ್, ಅಂಕಿತ್, ರೋಹಿತ್ ಸಾಂಗ್ವಾನ್. ಕೋಚ್: ರಣಧೀರ್ ಸಿಂಗ್ ಸೆಹ್ರಾವತ್ ಇದ್ದಾರೆ.
ಇನ್ನು 2014 ರಲ್ಲಿ ಪ್ರಾರಂಭವಾದ ಪ್ರೊ ಕಬಡ್ಡಿ ಹೊಸ ಜನರನ್ನು ತನ್ನ ಕಡೆ ಸೆಳೆದುಕೊಂಡಿದೆ ಈ ಬಾರಿ ಕೊರೋನಾ ಕಾರಣಕ್ಕೆ ಪಂದ್ಯಾವಳಿ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ನೇರಪ್ರಸಾರವನ್ನು ಮನೆಯಲ್ಲಿಯೇ ಕುಳಿತು ನೋಡಿ ಆನಂದಿಸಬಹುದಾಗಿದೆ.
ಬೆಂಗಳೂರು ಬುಲ್ಸ್ ತಂಡದ ಮೊದಲಾರ್ಧದ ವೇಳಾಪಟ್ಟಿ
- ಯು ಮುಂಬಾ ಡಿ.22 ಬುಧವಾರ ಸಂಜೆ 7:30
- ತಮಿಳ್ ತಲೈವಾಸ್ ಡಿ.24 ಶುಕ್ರವಾರ ರಾತ್ರಿ 8:30
- ಬಂಗಾಲ್ ವಾರಿಯರ್ಸ್ ಡಿ.26 ಭಾನುವಾರ ರಾತ್ರಿ 8:30
- ಹರ್ಯಾಣ ಸ್ಟೀಲರ್ಸ್ ಡಿ.30 ಗುರುವಾರ ರಾತ್ರಿ 8:30
- ತೆಲುಗು ಟೈಟಾನ್ಸ್ ಜ.1 ಶನಿವಾರ ರಾತ್ರಿ 8:30
- ಪುಣೇರಿ ಪಲ್ಟಾನ್ ಜ.2 ಭಾನುವಾರ ರಾತ್ರಿ 8:30
- ಜೈಪುರ್ ಪಿಂಕ್ ಪ್ಯಾಂಥರ್ಸ್ ಜ. 6 ಗುರುವಾರ ರಾತ್ರಿ 8:30
- ಯುಪಿ ಯೋದ್ಧಾ ಜ.9 ಭಾನುವಾರ ರಾತ್ರಿ 8:30
- ದಬಾಂಗ್ ಡೆಲ್ಲಿ ಜ.12 ಬುಧವಾರ ರಾತ್ರಿ 8:30
- ಗುಜರಾತ್ ಜೈಂಟ್ಸ್ ಜ.14 ಶುಕ್ರವಾರ ರಾತ್ರಿ 8:30
- ಪಾಟ್ನಾ ಪೈರೇಟ್ಸ್ ಜ.16 ಭಾನುವಾರ ರಾತ್ರಿ 8:30